ವಿಜಯಪುರ: ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರನ್ನು ಪೀಠತ್ಯಾಗ ಮಾಡಲು ನಿರ್ದೇಶಿಸಬೇಕು ಹಾಗೂ ಮಠದ ದೈನಂದಿನ ವ್ಯವಹಾರ ಸುಗಮವಾಗಿ ನಡೆಯಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚನೆ ಮಾಡಬೇಕು ಎಂದು ಶಾಸಕ ಬಸನಗೌಡ ಆರ್.ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅವರು ಈ ಕುರಿತು ಪತ್ರ ಬರೆದಿದ್ದಾರೆ.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠ ಐತಿಹಾಸಿಕ ವಿರಕ್ತ ಪರಂಪರೆಯ ಶೂನ್ಯಪೀಠದ ಅಗ್ರಗಣ್ಯ ಮಠವಾಗಿದೆ. ಆದರೆ, ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ, ಅವರು ನ್ಯಾಯಾಂಗ ಬಂಧನವಾಗಿರುವುದು ವೀರಶೈವ ಲಿಂಗಾಯತ ಸಮಾಜಕ್ಕೆ ಅಪಮಾನಕರವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Peenya ITI Convocation | 120 ಐಟಿಐಗಳ ಉನ್ನತೀಕರಣ, ಪಿಯುಸಿಗೆ ತತ್ಸಮಾನ ಪರಿಗಣನೆ
ಈ ಪ್ರಕರಣ ಸದ್ಯ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿರುವ ಕಾರಣ ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಪೀಠದಲ್ಲಿ ಮುಂದುವರಿಸುವುದು ಶ್ರೀಮಠದ ಘನ ಪರಂಪರೆಗೆ ಕಳಂಕ ತಂದಿದೆ. ಆದ್ದರಿಂದ, ಶಿವಮೂರ್ತಿ ಶರಣರು ಈ ಕೂಡಲೇ ಸ್ವಇಚ್ಛೆಯಿಂದ ಪೀಠತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ನಾಡಿನ ಭಕ್ತ ಸಮೂಹ ಮುಂದಾಗಲು ನಿರ್ದೇಶಿಸಬೇಕೆಂದು ಎಂದು ಅವರು ಕೋರಿದ್ದಾರೆ.
ಅಂತೆಯೇ, ಶ್ರೀ ಶಿವಮೂರ್ತಿ ಮುರುಘಾ ಶರಣರು ಸದ್ಯ ಜೈಲಿನಲ್ಲಿರುವ ಕಾರಣ ಶ್ರೀಮಠದ ಸಮಸ್ತ ಆಡಳಿತ ಚಟುವಟಿಕೆಯು ಅಸ್ಥವ್ಯಸ್ತಗೊಂಡಿದೆ. ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ ಹಾಲಿ ಕಾರ್ಯದರ್ಶಿ ಶ್ರೀ ವಸ್ತ್ರದಮಠ ಅವರು ಶಿವಮೂರ್ತಿ ಮುರುಘಾ ಶರಣರ ಏಕಪಕ್ಷೀಯ ನೇಮಕವಾಗಿರುತ್ತದೆ. ಇವರ ನೇಮಕದಿಂದ ಸ್ಥಳೀಯ ಭಕ್ತ ಸಮೂಹ ಅಸಮಾಧಾನಗೊಂಡಿದ್ದಾರೆಂಬ ವಿಚಾರವನ್ನು ತಮ್ಮ ಅವಗಾಹನೆಗೆ ತರಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈಗಿನ ಸಂದಿಗ್ಧ ಸಮಯದಲ್ಲಿ ಶ್ರೀಮಠದ ಸಾವಿರಾರು ನೌಕರರು ಸಂಬಳ ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಬ್ಯಾಂಕುಗಳು ಸೇರಿ ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ವಿವಿಧೆಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗಿದೆ. ಶ್ರೀಮಠದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ. ಮಠದ ಸುಗಮ ಆಡಳಿತ ನಿರ್ವಹಣೆಗಾಗಿ ವೀರಶೈವ-ಲಿಂಗಾಯತ ಸಮಾಜದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವೀರಶೈವ-ಲಿಂಗಾಯತ ಸಮಾಜದ ಐವರು ಪ್ರಮುಖರ ಉನ್ನತ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ಕೂಡಲೇ ನೇಮಿಸಬೇಕು ಎಂದವರು ಕೋರಿದ್ದಾರೆ.
ಮೇಲುಸ್ತುವಾರಿ ಸಮಿತಿಯು ಶ್ರೀ ಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ನಿರ್ಧಾರ ಕೈಗೊಳ್ಳಲು ತಾತ್ಕಾಲಿಕ ಅಧಿಕಾರ ಹೊಂದಿರಬೇಕು. ಮೂರು ತಿಂಗಳ ಒಳಗಾಗಿ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈ ಸಮಿತಿಯೇ ನೆರವೇರಿಸಬೇಕು. ಈ ಕುರಿತು ಸಮಿತಿ ಕೈಗೊಳ್ಳುವ ಎಲ್ಲ ಕಾನೂನು ರೀತ್ಯಾ ತೀರ್ಮಾನಕ್ಕೆ ಮಠದ ಸಮಸ್ತ ಸಮೂಹ ಬದ್ಧವಾಗಿರಲು ನಿರ್ದೇಶಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಕಲ್ಯಾಣ ಕರ್ನಾಟಕದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಆರಂಭ: ಸಿಎಂ ಬೊಮ್ಮಾಯಿ