ವಿಜಯಪುರ: ವಿಜಯಪುರಕ್ಕೆ ಕಮಲದ ಹೂ ತಂದವನು ನಾನು. ನಾನು ಎಂಪಿಯಾಗಿದ್ದಾಗ ಮಾಡಿದ ಕೆಲಸಗಳನ್ನು ನೋಡಬೇಕು. ಯಾರಪ್ಪನ ಪಕ್ಷ? ಪಕ್ಷ ಕಟ್ಟಿದವರು ನಾವು. ವಿಜಯಪುರದ ಪ್ರತಿ ಹಳ್ಳಿಗೂ ಹೋಗಿ ಕೇಳಿ,…ಪಕ್ಷ ಕಟ್ಟಿದವರು ಯಾರೆಂದು ಹೇಳುತ್ತಾರೆ. ನನ್ನನ್ನು ಪಕ್ಷದಿಂದ ಹೊರ ಹಾಕುವಂತಹ ತಾಕತ್ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಪಕ್ಷದ ಬಗ್ಗೆ ಗೌರವ ಇಲ್ಲದಿದ್ದರೆ ಬಿಜೆಪಿಯಲ್ಲಿ ಯಾಕೆ ಇದ್ದೀರಾ ಎಂಬ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಸಂಕ್ರಾಂತಿ ಹಬ್ಬದಂದು ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ನಿರಾಣಿ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಲು ಸಿಎಂಗೆ ಪತ್ರ ಬರೆದಿದ್ದೇನೆ. 24 ಗಂಟೆಯೊಳಗೆ ನನ್ನ ವಿರುದ್ಧದ ಚಾಲಕನ ಕೊಲೆ ಆರೋಪದ ತನಿಖೆಗೆ ಆದೇಶ ಕೊಡಬೇಕು. ಆರೋಪ ಸುಳ್ಳಾದರೆ ಸಚಿವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಟಿಕೆಟ್ ಸಿಗುವುದಿಲ್ಲ ಎಂಬ ವಿಚಾರಕ್ಕೆ ಉತ್ತರಿಸಿ, ಟಿಕೆಟ್ ಅಲ್ಲ,…ನೀವೇ ನೋಡುತ್ತೀರಿ. ಉತ್ತರಾಯಣ ಇವತ್ತು ಪ್ರಾರಂಭವಾಗಿದೆ. ಇನ್ನು ನಮ್ಮ ಶಕ್ತಿ ಏರುತ್ತಾ ಹೋಗುತ್ತದೆ. ಟಿಕೆಟ್ ವಿಚಾರ ಬಿಡಿ, ಟಿಕೆಟ್ ಕೊಡುವ ಸ್ಥಾನಕ್ಕೆ ನಾವೇ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Santro Ravi : ಪಿಂಪ್‌ಗಳಿಂದ ಹಣ ಮಾಡಿಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಆರಗ ಜ್ಞಾನೇಂದ್ರ
ಪಕ್ಷದ ಹೈಕಮಾಂಡ್ ಕರೆ ಮಾಡಿ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದು ಕೂಡಲಸಂಗಮ ಶ್ರೀಗಳ ಕಳೆದ ಎರಡು ವರ್ಷಗಳ ತಪಸ್ಸು, ಪಾದಯಾತ್ರೆಯ ಪ್ರತಿಫಲವಾಗಿದೆ. ಮಕರ ಸಂಕ್ರಮಣದ ಉತ್ತರಾಯಣದ ಶುಭ ಸಂದರ್ಭದಲ್ಲಿ ಹೈಕಮಾಂಡ್ ಈ ನಿಲುವು ತೆಗೆದುಕೊಂಡಿದೆ. ಆದಷ್ಟು ಬೇಗ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರನ್ನು ಭೇಟಿ ಮಾಡುತ್ತೇವೆ. ಶೀಘ್ರವೇ ಕೇಂದ್ರ ಒಳ್ಳೆಯ ಸುದ್ದಿ ಕೊಡಲಿದೆ ಎಂದು ತಿಳಿಸಿದರು.
ಜನವರಿ 21ರಂದು ವಿಜಯಪುರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಅವರು ಆಗಮಿಸುತ್ತಿದ್ದಾರೆ. ಮೀಸಲಾತಿ ವಿಚಾರವನ್ನು ಕೇಂದ್ರದ ವರಿಷ್ಠರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವದಲ್ಲಿ ನ್ಯಾಯ ಕೊಡದಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಒಬ್ಬ ಬಿಜೆಪಿ ಸಚಿವ, ಅವನ ಕೊಲೆಗೆ ಸುಪಾರಿ ಕೊಟ್ಟಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದ. ಅಥಣಿ ಠಾಣೆಯಲ್ಲಿ ಯತ್ನಾಳ್‌ರಿಂದ ಸುಪಾರಿ ಪಡೆದಿರುವುದಾಗಿ ಒಪ್ಪಿಕೊಳ್ಳುವಂತೆ ಯುವಕರಿಗೆ ಟಾರ್ಚರ್ ನೀಡಲಾಗಿತ್ತು. ಆ ಪ್ರಕರಣ ಸಿಒಡಿ ತನಿಖೆ ನಡೆದಾಗ ನಾನು ಆರೋಪದಿಂದ ಪಾರಾಗಿದ್ದೆ. ಈಗಿನ ನಿರಾಣಿ ಆರೋಪವೂ ಹಾಗೆಯೇ ಎಂದ ಅವರು, ತಾಕತ್ತಿದ್ದರೆ ಸಿಬಿಐ ಮೂಲಕ ತನಿಖೆ ಮಾಡಿಸಿ ಎಂದು ನಿರಾಣಿಗೆ ಸವಾಲು ಹಾಕಿದರು.
ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸ್ಯಾಂಟ್ರೋ ರವಿ…ಸಚಿವರ ಜತೆ ಇರುವ ಫೋಟೋ ಇರುತ್ತವೆ.…ಅಷ್ಟು ಮಾತ್ರಕ್ಕೆ ಆತ್ಮೀಯರೆಂದು ತಿಳಿದುಕೊಳ್ಳಬಾರದು. ಅವರ ಹತ್ತಿರ ಏನು ಸಾಕ್ಷ್ಯ ಇದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದ ಅವರು, ಸ್ಯಾಂಟ್ರೋ ರವಿ ಕೇಸ್ ಏನೂ ಆಗಲ್ಲ. ಒಂದು ವಾರ ಮಾಧ್ಯಮಗಳು ತೋರಿಸುತ್ತವೆ, ಮತ್ತೊಂದು ಸುದ್ದಿ ಬರುತ್ತದೆ ಅದನ್ನು ಪ್ರಸಾರ ಮಾಡುತ್ತೀರಿ ಎಂದರು.
ಯುವರಾಜ್ ಬಂಧನ ಡ್ರಗ್ಸ್‌ಗಾಗಿ ಅಲ್ಲ. ಡ್ರಗ್ಸ್ ಒಂದು ನೆಪ ಮಾತ್ರ. “ಸಂಜಾತ ಪುತ್ರ”ನೊಬ್ಬ ವಿಡಿಯೊ ಡಿಲೀಟ್ ಮಾಡಿಸಲು ಆಡಿದ ನಾಟಕವಾಗಿದೆ. ಪೊಲೀಸರು ಅರೆಸ್ಟ್ ಮಾಡಿದಾಗ ಮೊದಲು ಪೋನ್ ಕಸಿದುಕೊಂಡು ವಿಡಿಯೊ ಡಿಲೀಟ್ ಮಾಡಿದ್ದರು ಎಂದು ಯುವರಾಜ್ ಬಂಧನ ತನಿಖೆಯ ಬಗ್ಗೆಯೂ ಅನುಮಾನ ಹೊರಹಾಕಿದ ಯತ್ನಾಳ್, ನನ್ನ ವಿರುದ್ಧ ಆರೋಪ ಮಾಡುತ್ತಿರುವ ಮಂತ್ರಿಗಳ ವಿಡಿಯೊ ಕೂಡ ಯುವರಾಜ್ ಬಳಿ ಇದೆ ನಿರಾಣಿ ಮೇಲೆ ಹರಿಹಾಯ್ದರು.