Site icon Vistara News

BJP ಜನಸ್ಪಂದನ | ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಸಿಎಂ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಬೊಮ್ಮಾಯಿ ಘೋಷಣೆ

ಪ್ರವೀಣ್ ನೆಟ್ಟಾರು

ದೊಡ್ಡಬಳ್ಳಾಪುರ: ಸುಳ್ಯದಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರಿಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾಗೆಯೇ, ಅವರ ಕುಟುಂಬಸ್ಥರಿಗೆ ಸಿಎಂ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನವೇ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು. ವೇದಿಕೆಯ ಮೇಲೆ ಪ್ರವೀಣ್ ನೆಟ್ಟಾರು ಹಾಗೂ ಇತ್ತೀಚೆಗೆ ನಿಧನರಾದ ಹಿರಿಯ ಸಚಿವ ಉಮೇಶ್ ಕತ್ತಿ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಎಲ್ಲರೂ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.

ಇದನ್ನೂ ಓದಿ | BJP ಜನಸ್ಪಂದನ | ಸಿಎಂ ಬೊಮ್ಮಾಯಿ ಭಾಷಣ ಮಾಡುವ ಹೊತ್ತಿಗೆ ಸಭಾಂಗಣದಲ್ಲಿ ಖಾಲಿ ಕುರ್ಚಿ!

ಪ್ರಾರಂಭದಲ್ಲಿ ಮಾತನಾಡಿದ ಡಾ.ಕೆ. ಸುಧಾಕರ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ.‌ರವಿ ಅವರುಗಳು ಪ್ರವೀಣ್ ನೆಟ್ಟಾರು ಅವರನ್ನು ಸ್ಮರಿಸಿದರು. ತಮ್ಮ ಭಾಷಣ ಮುಗಿಸಿ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪ್ರವೀಣ್ ನೆಟ್ಟಾರು ವಿಷಯ ನೆನಪಿಸಿಕೊಂಡು ಮತ್ತೆ ಮೈಕ್‌ನತ್ತ ಆಗಮಿಸಿ, ನೆಟ್ಟಾರು ಅವರ ಕುಟುಂಬದವರೊಬ್ಬರಿಗೆ ತಮ್ಮ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಘೋಷಣೆ ಮಾಡಿದರು.

ನಂತರ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಪ್ರವೀಣ್ ಅವರನ್ನು ಕೊಂದವರು ಹೇಡಿಗಳು. ಹೇಡಿಗಳು ಎಂದಿಗೂ ಬೆನ್ನಿಗೆ ಚೂರಿ ಇರಿಯುತ್ತಾರೆ, ಎದುರಿನಿಂದ ಬಂದು ಯುದ್ಧ ಮಾಡುವುದಿಲ್ಲ ಎಂದು ಹತ್ಯೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನೋತ್ಸವ ಎಂದು ಹೆಸರಿಡಲಾಗಿದ್ದ ಈ ಕಾರ್ಯಕ್ರಮ ಮೊದಲಿಗೆ ಜುಲೈ 28ರಂದು ನಡೆಯಬೇಕಿತ್ತು. ಆದರೆ ಜುಲೈ 26ರಂದು ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾಗಿತ್ತು. ನಂತರ ಬಿಜೆಪಿ ಕಾರ್ಯಕರ್ತರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಉಂಟಾಗಿತ್ತು. ಹಿಂದು ಕಾರ್ಯಕರ್ತರ ಸತತ ಹತ್ಯೆಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಜ್ಯಾದ್ಯಂತ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ಪರ್ವ ಆರಂಭಿಸಿದ್ದರು.

ಇದರಿಂದ ಜನೋತ್ಸವ ಕಾರ್ಯಕ್ರಮದಲ್ಲೂ ವಿರೋಧ ಎದುರಿಸಬೇಕಾಗುತ್ತದೆ ಎಂದು ಬೆದರಿದ ಬಿಜೆಪಿ, ಕಾರ್ಯಕ್ರಮವನ್ನು ಮುಂದೂಡಿತ್ತು. ಮತ್ತೆ ಆಗಸ್ಟ್ 28 ರಂದು ಕಾರ್ಯಕ್ರಮ ನಡೆಯಬೇಕಿತ್ತಾದರೂ ಕೇಂದ್ರ ನಾಯಕರ ಆಗಮನ ಖಚಿತವಾಗದೇ ಮುಂದೂಡಿಕೆಯಾಗಿತ್ತು. ಸೆಪ್ಟೆಂಬರ್ 8ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹಿರಿಯ ಸಚಿವ ಉಮೇಶ್ ಕತ್ತಿ ನಿಧನದಿಂದ ಮತ್ತೆ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಶನಿವಾರ (ಸೆಪ್ಡೆಂಬರ್ 10) ಜನೋತ್ಸವ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ | BJP ಜನಸ್ಪಂದನ | ವಲಸಿಗ ಶಾಸಕರನ್ನು ವೀರರು ಎಂದ ಸಿಎಂ ಬೊಮ್ಮಾಯಿ

Exit mobile version