ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಸಮರ ಜೋರಾಗಿರುವ ನಡುವೆಯೇ ಆಗಸ್ಟ್ ೧೫ರ ಒಳಗೆ ರಾಜ್ಯದ ಮುಖ್ಯಮಂತ್ರಿ ಬದಲಾಗಬಹುದು ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿ ಈ ವಿಷಯ ಚರ್ಚೆಗೆ ಕಾರಣರಾದ ತುಮಕೂರಿನ ಬಿಜೆಪಿಯ ಮಾಜಿ ಶಾಸಕ ಬಿ. ಸುರೇಶ್ ಗೌಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ಸುರೇಶ್ ಗೌಡರಿಗೆ ಕರೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಿಎಂ ಬದಲಾವಣೆ ಮಾಹಿತಿಯ ಮೂಲ ಯಾವುದು ಎಂದು ನನಗೂ ತಿಳಿಸು ಎಂದು ಕೇಳಿದ್ದಾರೆ. ಆಗ ತಬ್ಬಿಬ್ಬಾದ ಸುರೇಶ್ ಗೌಡ, ಮಾಧ್ಯಮಗಳಲ್ಲಿ ಬಂದಿದ್ದನ್ನ ನೋಡಿ ರಿಯಾಕ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
” ನಾನು ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆಂದು ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ʼʼಎಂದೆಲ್ಲಾ ಸುರೇಶ್ ಗೌಡ ವಿವರಣೆ ನೀಡಿದ್ದಾರೆಂದು ಗೊತ್ತಾಗಿದೆ. ನಾನು ಹಾಗೆ ಹೇಳದೇ ಇದ್ದರೂ ಕಾಂಗ್ರೆಸ್ ರಾಜಕೀಯವಾಗಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದ ಸುರೇಶ್ ಗೌಡ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಲು ಮುಂದಾದರೆನ್ನಲಾಗಿದೆ.
ʼʼಮೊದಲು ನಾವು ಸರಿಯಿದ್ರೆ ನಮ್ಮ ಬಗ್ಗೆ ಕಾಂಗ್ರೆಸ್ ಅವರು ಏನಾಕ್ಕೆ ಮಾತನಾಡ್ತಾರೆʼʼ ಎಂದು ಸುರೇಶ್ ಗೌಡ ಅವರನ್ನು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.
ಆಗ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗದ ಸುರೇಶ್ ಗೌಡ, ʼʼನಾಳೆ ಮನೆಗೆ ಬಂದು ವಿವರಣೆ ಕೊಡ್ತೀನಿʼʼ ಎಂದು ಮಾತು ತಿರುಗಿಸಲು ಯತ್ನಿಸಿದರೂ ಸಿಟ್ಟು ಕಡಿಮೆಮಾಡಿಕೊಳ್ಳದೆ ಬಸವರಾಜ ಬೊಮ್ಮಾಯಿ, “ನಾಳೆ ನಾನು ಮಂಡ್ಯಕ್ಕೆ ಹೋಗುತ್ತಿದ್ದೇನೆ, ನಿಮಗೆ ಸಿಗಲ್ಲʼʼ ಎಂದು ಹೇಳಿದರೆನ್ನಲಾಗಿದೆ.
“ನೀವು ನನಗೆ ವಿವರಣೆ ಕೊಡಬೇಕಾಗಿಲ್ಲ. ಪಕ್ಷದ ಅಧ್ಯಕ್ಷರಿಗೆ ಕೊಡಿʼʼ ಎಂದು ಸುರೇಶ್ ಗೌಡಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ| ಸಿಎಂ ಬೊಮ್ಮಾಯಿ ಸ್ಥಾನಪಲ್ಲಟ ಆಗದು ಎನ್ನುವುದಕ್ಕೆ ಇಲ್ಲಿವೆ ಒಂದು ಡಜನ್ ಕಾರಣಗಳು!