Site icon Vistara News

Basavaraj Bommai | ಕೇಜ್ರಿವಾಲ್ ಮಾದರಿಯಲ್ಲಿ ಕಾಂಗ್ರೆಸ್‌ ಜನರ ಮರುಳು ಮಾಡಲು ಮುಂದಾಗಿದೆ: ಸಿಎಂ ಬೊಮ್ಮಾಯಿ

Basavaraj Bommai

ದಾವಣಗೆರೆ: ಕಾಂಗ್ರೆಸ್ ಜನರನ್ನು ಮರುಳು ಮಾಡುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿರುವ ಕಾಂಗ್ರೆಸ್‌ ನಾಯಕರು, ಹತಾಶರಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು‌ ಕಾಂಗ್ರೆಸ್‌ನ ೨೦೦ ಯುನಿಟ್ ಉಚಿತ ವಿದ್ಯುತ್ ಘೋಷಣೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈಗಾಗಲೇ ಏನೆಲ್ಲ ಕೊಡಬೇಕೋ ಅದನ್ನೆಲ್ಲ ಕೊಟ್ಟಿದ್ದೇವೆ. ವರ್ಷದ ಹಣಕಾಸು ವ್ಯವಸ್ಥೆ, ಅಂತ್ಯದಲ್ಲಿನ ಹಣಕಾಸು ವ್ಯವಸ್ಥೆ ನೋಡಿಕೊಂಡು ಪ್ಲ್ಯಾನ್ ಮಾಡುತ್ತೇವೆ. ಡಿಸೆಂಬರ್‌ವರೆಗೂ ಗುರಿ ಮೀರಿ ಸಾಧನೆ ಆಗಿದೆ. ಮುಂದಿನ ಬಜೆಟ್ ಗಾತ್ರ ತೀರ್ಮಾನಕ್ಕೆ ಸಮಯಾವಕಾಶ ಇದೆ. ಹೀಗಾಗಿ ಈ ಬಾರಿ ಜನಪರ ಬಜೆಟ್ ಮಂಡಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ 25 ಟೆಕ್ಸ್‌ಟೈಲ್ ಪಾರ್ಕ್ ಮಾಡುತ್ತೇವೆ. ಮೀಸಲಾತಿ ವಿಚಾರವಾಗಿ ಈಗಾಗಲೇ ಎಲ್ಲ ಮಾಡಿದ್ದೇವೆ. ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆಯಲಾಗಿದೆ. ತಮಿಳುನಾಡು ಮಾದರಿಯಲ್ಲಿ ನಾವು ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | Panchamasali reservation | ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಚಾಟಿಸಿದರೆ ಪಂಚಮಸಾಲಿ ಸಮುದಾಯ ಜತೆಗಿರುತ್ತದೆ ಎಂದ ಸ್ವಾಮೀಜಿ

ಯತ್ನಾಳ್ ಮಾತುಗಳಿಗೆ ಭಾವುಕರಾದ ನಿರಾಣಿ
ಬಿಜೆಪಿ ಸಂಸ್ಕೃತಿ ಹೊಂದಿರೋ ಪಕ್ಷ, ನಮ್ಮ ಸಮುದಾಯದವೂ ಸಂಸ್ಕೃತಿ ಹೊಂದಿದೆ. ಯತ್ನಾಳ್‌ ಅಸಾಂವಿಧಾನಿಕ ಮಾತುಗಳನ್ನು ಆಡುತ್ತಾರೆ. ಜಯಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಶೇ.100 ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಅಸಮಾಧಾನ ಹೊರಹಾಕಿದರು.

ಯಡಿಯೂರಪ್ಪ ಸರ್ಕಾರ ಇದ್ದಾಗ ಪಂಚಮಸಾಲಿ ಸಮುದಾಯವನ್ನು ಒಬಿಸಿ 3ಬಿಗೆ ಸೇರಿಸುವ ಕೆಲಸ ಮಾಡಿದ್ದರು. 2013-18ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕಾಂತರಾಜ್ ವರದಿಯನ್ನು ಸರ್ಕಾರ ನಿರಾಕರಿಸಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮ್ಮನಿದ್ದ ಸ್ವಾಮೀಜಿ ಈಗ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೊಮ್ಮಾಯಿ, ಯಡಿಯೂರಪ್ಪ ನಮ್ಮ ಸಮುದಾಯದಕ್ಕೆ ಮೀಸಲಾತಿ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯತ್ನಾಳ್ ಜೆಡಿಎಸ್‌ಗೆ ಹೋಗಿ ಟಿಪ್ಪು ಬಗ್ಗೆ ಹೊಗಳಿದ್ದು, ಹಿಂದುಗಳನ್ನು ಬೈದಿದ್ದು ಇನ್ನೂ ಜನ ಮರೆತಿಲ್ಲ. ಇವರು ಡೋಂಗಿ ರಾಜಕಾರಣ ಮಾಡಿರುವುದು ಜನರಿಗೆ ತಿಳಿದಿದೆ ಎಂದು ಟೀಕಿಸಿದರು.

ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಯತ್ನಾಳ್‌ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಯತ್ನಾಳ್‌ಗೆ ಪಕ್ಷದಲ್ಲಿ ಇರುವುದು ಇಷ್ಟವಿಲ್ಲದಿದ್ದರೆ ಬಿಜೆಪಿ ಬಿಟ್ಟು ಹೋಗಲಿ. ಯತ್ನಾಳ್ ಯಾರನ್ನು ಬಿಟ್ಟಿದ್ದಾರೆ? ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬೊಮ್ಮಾಯಿ, ಶೆಟ್ಟರ್, ಸೋಮಣ್ಣ ಹೀಗೆ ಎಲ್ಲರ ವಿರುದ್ಧವೂ ಮಾತನಾಡಿದ್ದಾರೆ. ಮೀಸಲಾತಿಗಾಗಿ ನ್ಯಾಯಾಲಯಕ್ಕೆ ಹೋಗಿ ಕೈಕಾಲು ಹಿಡಿದು ಬಂದಿದ್ದಾರೆ. ಕಾಂಗ್ರೆಸ್‌ನಲ್ಲೇ ಲಿಂಗಾಯತರಿಗೆ ಮೀಸಲಾತಿ ಕೊಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಯತ್ನಾಳ್ ಅವರ ವಿರುದ್ಧ ಹೋರಾಟ ಮಾಡುವುದು ಬಿಟ್ಟು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಭಾವುಕರಾದರು.

ಇದನ್ನೂ ಓದಿ | Panchamasali reservation | ಸ್ವಾಮೀಜಿಗಳು ವಿಷಮ ಪರಿಸ್ಥಿತಿ ನಿರ್ಮಿಸಬಾರದು ಎಂದ ಬೊಮ್ಮಾಯಿ; ಪಕ್ಷ ವಿರೋಧಿಗಳ ಬಗ್ಗೆಯೂ ಕ್ರಮ

Exit mobile version