Site icon Vistara News

Basavaraj Bommai | ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯೋದಿಲ್ಲ: ಸಿಎಂ ಬೊಮ್ಮಾಯಿ

Basavaraj Bommai

ಹಾವೇರಿ: ಪರಿಶಿಷ್ಟರ ಬದುಕು ಯಾರ ಕಾಲದಲ್ಲಿ ಎಷ್ಟು ಉತ್ತಮಗೊಂಡಿದೆ. ಅವರ ಹಕ್ಕುಗಳನ್ನು ಯಾರು ರಕ್ಷಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಜನಾಂಗ ಜಾಗೃತವಾಗಿದ್ದು, ಜಾಗತೀಕರಣದ ನಂತರ ಅವರ ಆಶೋತ್ತರಗಳು ಹೆಚ್ಚಾಗಿದೆ. ಅದಕ್ಕೆ ತಕ್ಕ ಹಾಗೆ ನಮ್ಮ ಸರ್ಕಾರದಿಂದ ಸ್ಪಂದಿಸುವ ಕೆಲಸ ಮಾಡಿದ್ದೇವೆ. ವಿರೋಧ ಪಕ್ಷದವರು ಸಹಜವಾಗಿ ವಿರೋಧಿಸುತ್ತಾರೆ. ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಚುನಾವಣಾ ಅಖಾಡಕ್ಕೆ ಧುಮುಕಿ ಬಹಳ ದಿನಗಳಾಗಿವೆ. ಯಾರ ಆಡಳಿತದಲ್ಲಿ ಯಾರು ಪರಿಶಿಷ್ಟರಿಗೆ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ? ಏನು ಅನುಷ್ಠಾನವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ತಿಳಿಸಿದರು.

ಸ್ವಾಮೀಜಿಗಳಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ಇಲ್ಲ
ಸ್ವಾಮೀಜಿಗಳು ಟಿಕೆಟ್ ಆಕಾಂಕ್ಷಿಗಳಾಗಿ ವಿಧಾನಸಭೆಗೆ ಧುಮುಕುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ತಿಳಿದಿಲ್ಲ. ವಿರೋಧ ಪಕ್ಷಗಳು ಏನು ಹೇಳಿವೆ ಎನ್ನುವುದು ತಿಳಿದಿಲ್ಲ ಎಂದರು.

ಇದನ್ನೂ ಓದಿ | Karnataka Election : ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ

ಎಲ್ಲ ಕ್ಷೇತ್ರಗಳನ್ನು ತಲುಪಲು ರಥಯಾತ್ರೆ
ಕಾಂಗ್ರೆಸ್ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ಪಕ್ಷ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬಿಜೆಪಿ ರಾಜ್ಯ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದಂತೆ ಬೂತ್ ವಿಜಯ ಕಾರ್ಯಕ್ರಮ ಪ್ರಾರಂಭವಾಗಿದೆ. ಜ.21 ರಿಂದ 29 ರವರೆಗೆ ಮನೆ ಮನೆಗೆ ಮಾಹಿತಿ ನೀಡುವ ಮತ್ತೊಂದು ಅಭಿಯಾನ ಪ್ರಾರಂಭವಾಗಲಿದೆ. ಜನಸಂಕಲ್ಪ ಯಾತ್ರೆಯೂ ಮುಂದುವರಿಯಲಿದೆ. ಎಲ್ಲ ಕ್ಷೇತ್ರಗಳನ್ನು ತಲುಪಲು ರಥ ಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಹಿಂಸೆಗೆ ಅವಕಾಶ ಸಲ್ಲದು
ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷರ ಮೇಲೆ ಗುಂಡಿನ ದಾಳಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸರಿಗೆ ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಬಂಧಿಸಿ ಕೂಡಲೇ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ. ಭಿನ್ನ ಅಭಿಪ್ರಾಯ ಇದ್ದ ಮಾತ್ರಕ್ಕೆ ಹಿಂಸೆಗೆ ಅವಕಾಶ ನೀಡಬಾರದು. ಅಪರಾಧಿಗಳನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ ಎಂದರು.

ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕ ಅಂಶಗಳ ಅನುಷ್ಠಾನ
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗಳನ್ನು ಸಮ್ಮೇಳನದ ಅಧ್ಯಕ್ಷರ ಮೂಲಕ ಪಡೆದು ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ಸಾಹಿತಿಗಳ ಅನಿಸಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ತವರು ಜಿಲ್ಲೆಯಲ್ಲಿ ಎಲ್ಲರೂ ಸೇರಿ ನಡೆಸಿದ್ದು, ಸಂತೋಷ ತಂದಿದೆ. ಇದಕ್ಕಾಗಿ ಸಮಸ್ತ ಹಾವೇರಿ ಜಿಲ್ಲೆಯ ಜನರಿಗೆ ಅಭಿನಂದಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | Karnataka Election : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ವರದಿ ಮಂಡನೆ, ಭೂರಹಿತ ಪರಿಶಿಷ್ಟರಿಗೆ 2 ಎಕರೆ: ಡಾ.ಜಿ. ಪರಮೇಶ್ವರ್‌

Exit mobile version