ವಿಜಯಪುರ: ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ (Siddheshwar Swamiji) ದೇಹಾಂತ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಶ್ರೀಗಳ ದೇಹಾಂತ್ಯದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ್ದಾರೆ.
“ಜ್ಞಾನಯೋಗಾಶ್ರಮದ ಪೀಠಾಧೀಶರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಅತೀವ ನೋವುಂಟುಮಾಡಿದೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಾಪ
ಬೆಂಗಳೂರು: ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿಯವರು ತಮ್ಮ ನಿಷ್ಕಾಮ ಕರ್ಮದಿಂದಾಗಿ ‘ನಡೆದಾಡುವ ದೇವರು’ ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ತಾವು ಪಡೆದದ್ದೆಲ್ಲವನ್ನೂ ಸಮಾಜಕ್ಕೆ ಸಲ್ಲಿಸಬೇಕೆಂಬುದೇ ಅವರ ಬದುಕಿನ ಪರಮ ಧ್ಯೇಯವಾಗಿತ್ತು. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ಚೈತನ್ಯವನ್ನು ಅನುಭವಿಸಿ, ಅದನ್ನು ಬೇರೆಯವರಿಗೂ ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಶ್ರೀಗಳ ನಿಧನದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಶಿಷ್ಯ ಗಣಕ್ಕೆ ಮತ್ತು ಭಕ್ತ ವೃಂದಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ | Siddheshwar Swamiji | ಜ್ಞಾನದ ನಿಧಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹಾಂತ್ಯ