ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ನವೆಂಬರ್ 23ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸೀನಿಯರ್ ಅಡ್ವೊಕೇಟ್ ತಂಡ ರಚಿಸಿದೆ. ರಾಜ್ಯದ ಪರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡ್ವೊಕೇಟ್ ತಂಡ ರಚಿಸಿದ್ದಾರೆ.
ವಕೀಲರ ತಂಡ ರಚಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, “ಗಡಿ ವಿವಾದವು ಮಹಾರಾಷ್ಟ್ರದ ರಾಜಕೀಯ ವಿಚಾರ ಆಗಿದೆ. ಹಾಗಾಗಿ, ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸಲು ನಿವೃತ್ತ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್, ಉದಯ್ ಹೊಳ್ಳ, ಮಾರುತಿ ಜಿರ್ಲೆ ಹಾಗೂ ರಘುಪತಿ ಅವರನ್ನು ನೇಮಕ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯ ವಿಚಾರಣಾರ್ಹತೆ (Maintainability) ಕುರಿತು ಸುಪ್ರೀಂ ಕೋರ್ಟ್ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಮಾನ್ಯತೆ ನೀಡುವ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಮಾನ್ಯತೆ ಆಗಬಾರದು ಎಂಬುದರ ಕುರಿತು ವಾದ ಮಂಡಿಸಲು ತಂಡ ರಚಿಸಲಾಗಿದೆ. ಸಂವಿಧಾನದ ೩ನೇ ಪರಿಚ್ಛೇದದ ಪ್ರಕಾರ, ರಾಜ್ಯ ಪುನರ್ ವಿಂಗಡಣೆ ಆಗಿದ್ದನ್ನು ಮರು ಪರಿಶೀಲನೆ ಮಾಡುವ ಸಂದರ್ಭ ದೇಶದಲ್ಲಿ ಎಲ್ಲಿಯೂ ಬಂದಿಲ್ಲ” ಎಂದರು.
ನಾಡು, ನುಡಿಗೆ ಒಗ್ಗಟ್ಟಾಗಿ ಹೋರಾಟ
“ಗಡಿ ವಿವಾದ ಮಹಾರಾಷ್ಟ್ರದ ರಾಜಕೀಯ ವಿಚಾರ ಆಗಿದೆ. ಇಲ್ಲಿಯವರೆಗೆ ಎಲ್ಲ ಸರ್ಕಾರಗಳೂ ಇದಕ್ಕೆ ಪ್ರಯತ್ನಿಸಿದರೂ ಯಶಸ್ವಿ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ನಾವು ಕನ್ನಡ ನಾಡು, ನುಡಿ, ನೀರಿಗೆ ಒಗ್ಗಟ್ಟಾಗಿ ಹೋರಾಟ ಮಾಡಿದ್ದೇವೆ. ಮುಂದೆಯೂ ಹೋರಾಟ ಮಾಡುತ್ತೇವೆ. ಇದಕ್ಕೆ ಅವಶ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳಲಿದೆ,” ಎಂದು ಮಾಹಿತಿ ನೀಡಿದರು.
ತಂಡ ರಚಿಸುವ ಮೊದಲು ಬಸವರಾಜ ಬೊಮ್ಮಾಯಿ ಅವರು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಜತೆ ಮಾತುಕತೆ ನಡೆಸಿದರು. ಅತ್ತ, ಬೆಳಗಾವಿ ಗಡಿ ವಿವಾದದ ಕುರಿತು ವಾದ ಮಂಡಿಸಲು ಮಹಾರಾಷ್ಟ್ರ ಸರ್ಕಾರ ಕೂಡ ಸಜ್ಜಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದೆ. ಹಾಗಾಗಿ, ಎರಡೂ ರಾಜ್ಯಗಳ ಜನರ ಗಮನ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ.
ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅಂತಿಮ ಘಟ್ಟಕ್ಕೆ, 23ರಂದು ಸುಪ್ರೀಂ ತೀರ್ಪು