Site icon Vistara News

Hampi Utsav 2023 | ಐತಿಹಾಸಿಕ ಹಂಪಿಯಲ್ಲಿ ವೈಭವದ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Hampi Utsav 2023

ವಿಜಯನಗರ: ವಿಶ್ವವಿಖ್ಯಾತ ಹಂಪಿಯಲ್ಲಿ ವೈಭವದ ಹಂಪಿ ಉತ್ಸವಕ್ಕೆ (Hampi Utsav 2023) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಂಜೆ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಉತ್ಸವದ ಮೂರ್ತಿ ತಾಯಿ ಭುವನೇಶ್ವರಿಗೆ ಪುಷ್ಪನಮನದ ಮೂಲಕ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದು, ಸಾವಿರಾರು ಜನ ಇದಕ್ಕೆ ಸಾಕ್ಷಿಯಾಗಿದ್ದಾರೆ.

ಹಂಪಿಯ ಗತವೈಭವ ಸಾರುವ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ಮಾತನಾಡಿದರು. “ಕೊರೊನಾದಿಂದಾಗಿ ತಾತ್ಕಾಲಿಕವಾಗಿ ಹಂಪಿ ಉತ್ಸವವನ್ನು ನಿಲ್ಲಿಸಲಾಗಿತ್ತು. ಆದರೆ, ಕೊರೊನಾ ಬಳಿಕ ನಡೆಯುತ್ತಿರುವ ಮೊದಲ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನ ಐತಿಹಾಸಿಕ ಸ್ಥಳದ ಮಹತ್ವ ಸಾರುವ ಕಾರ್ಯಕ್ರಮಗಳು, ಚಟುವಟಿಕೆಗಳು ನಡೆಯಲಿವೆ” ಎಂದು ತಿಳಿಸಿದರು.

“ಹಂಪಿಯ ಒಂದೊಂದು ಶಿಲೆಗಳು ಕೂಡ ಇತಿಹಾಸವನ್ನು ಸಾರುತ್ತವೆ. ವಿಜಯನಗರದ ಭೂಮಿ, ನೀರಿನ ವ್ಯವಸ್ಥೆ ನೋಡಿ ಅರಸರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ತಮಿಳುನಾಡಿನ ಕಾವೇರಿ ತೀರದವರೆಗೆ ವಿಸ್ತರಿಸಿತ್ತು. ಅಷ್ಟರಮಟ್ಟಿಗೆ ಹಂಪಿಯು ವೈಭವೋಪೇತವಾದ ಇತಿಹಾಸವನ್ನು ಹೊಂದಿದೆ” ಎಂದರು.

ಜನರ ನಿರುತ್ಸಾಹಕ್ಕೆ ಬೇಸರ

ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದಿರುವುದಕ್ಕೆ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. “ಹಂಪಿ ಉತ್ಸವಕ್ಕೆ ಈಗಷ್ಟೇ ಚಾಲನೆ ನೀಡಲಾಗಿದೆ. ಇನ್ನೂ ಜನ ಹಳ್ಳಿಗಳಿಂದ ಬರಬೇಕಿದೆ. ಹಾಗಾಗಿ ಜನ ಸ್ವಲ್ಪ ಕಡಿಮೆ ಇದ್ದಾರೆ” ಎಂದು ಹೇಳಿದರು. ಚಾಲನೆ ನೀಡುವ ಕಾರ್ಯಕ್ರಮಕ್ಕಾಗಿ 60 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, 5-6 ಸಾವಿರ ಜನ ಮಾತ್ರ ಪಾಲ್ಗೊಂಡಿದ್ದರು.

ಚಾಲನೆ ನೀಡಲು 2 ಗಂಟೆ ವಿಳಂಬ

ಹಂಪಿ ಉತ್ಸವಕ್ಕೆ ಬಸವರಾಜ ಬೊಮ್ಮಾಯಿ ಅವರು ಸಂಜೆ 6 ಗಂಟೆಗೆ ಚಾಲನೆ ನೀಡಬೇಕಿತ್ತು. ಆದರೆ, ಎರಡು ಗಂಟೆ ತಡವಾಗಿ ಅಂದರೆ, ರಾತ್ರಿ ಎಂಟು ಗಂಟೆಗೆ ಚಾಲನೆ ನೀಡಲಾಯಿತು. ಇದು ಕೂಡ ಜನರ ಉತ್ಸಾಹ ಕುಗ್ಗಿಸಲು ಕಾರಣವಾಯಿತು. ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಾರಿಗೆ ಸಚಿವ ಬಿ.ಶ್ರೀರಾಮುಲು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಅರ್ಜುನ್‌ ಜನ್ಯ, ಅರ್ಮಾನ್‌ ಮಲಿಕ್‌, ಎಂ.ಡಿ. ಪಲ್ಲವಿ ಸೇರಿ ಹಲವರು ನೆರೆದಿದ್ದ ಜನರಿಗೆ ಸಂಗೀತದ ರಸದೌತಣ ಉಣಬಡಿಸಿದರು. ಒಟ್ಟಿನಲ್ಲಿ ಮೊದಲ ದಿನದ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದ್ದು, ಮೂರು ದಿನ ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ | Hampi : ಹಂಪಿಯ ಸ್ಮಾರಕಗಳ ನಡುವೆ ಪುರಂದರದಾಸರ ಆರಾಧನೆ

Exit mobile version