ಕೊಪ್ಪಳ: ಗವಿಸಿದ್ದೇಶ್ವರ ಮಠದ ಶ್ರೀಗಳು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಮಠಕ್ಕೆ ಸಹಾಯವಾಗಲಿ ಎಂದು ಸರ್ಕಾರದಿಂದ 10 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಸೋಮವಾರ ಭೇಟಿ ನೀಡಿ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ಈ ಭಾಗದಲ್ಲಿ ಪರಮಪೂಜ್ಯರು ಮಾಡುತ್ತಿರುವ ವಿದ್ಯೆ ಮತ್ತು ಅನ್ನ ದಾಸೋಹ ಸೇವೆ ಬಹಳ ವರ್ಷಗಳಿಂದ ನಡೆದಿದೆ. ಇದು ಬಡ ಜನರು, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ. ಮಠ ಈ ಭಾಗದ ಜನರ ವಿದ್ಯೆಗೆ ನಂದಾದೀಪವಾಗಿದ್ದು, ಅಮೋಘವಾದ ಕೆಲಸವನ್ನು ಪರಮಪೂಜ್ಯರು ಮಾಡುತ್ತಿರುವುದು ನಾಡಿನ ಸೌಭಾಗ್ಯವಾಗಿದೆ ಎಂದರು.
ಇದನ್ನೂ ಓದಿ | ಜಾತಿ ಅಸ್ತ್ರದೊಂದಿಗೆ ಯಾರೂ ಸಿಎಂ ಆಗಿಲ್ಲ: ಡಿಕೆಶಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಾಂಗ್
ಎರಡು ವರ್ಷ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಈ ಬಾರಿ 2,000ಕ್ಕಿಂತ ಹೆಚ್ಚು ಮಕ್ಕಳು ಮಠಕ್ಕೆ ಸೇರ್ಪಡೆಯಾಗಿದ್ದು, ಒಟ್ಟು 3,500 ಮಕ್ಕಳು ಇಲ್ಲಿದ್ದಾರೆ. ಅವರಿಗೆಲ್ಲರಿಗೂ ಕೂಡ ವಸತಿ, ದಾಸೋಹ ಕೇಂದ್ರಗಳನ್ನು ಮಾಡಬೇಕು ಎಂದು ಪರಮಪೂಜ್ಯರು ತಿಳಿಸಿದ್ದರು. ಈ ಬಗ್ಗೆ ಸಂಸದ ಕರಡಿ ಸಂಗಣ್ಣ, ಸಚಿವ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ಅವರು ತಿಳಿಸಿದ್ದರು. ಹೀಗಾಗಿ ಸಚಿವ ಆನಂದ ಸಿಂಗ್ ಅವರ ಒತ್ತಾಸೆಯ ಮೇರೆಗೆ ಕೂಡಲೇ 10 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಸರ್ಕಾರ ಮಾಡುತ್ತದೆ, ಭಕ್ತರೂ ಸಹಾಯ ಮಾಡಿ
ಮಠದಲ್ಲಿ ಹೆಚ್ಚುವರಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬಂದಿದ್ದಾರೆ. ಅವರಿಗೆ ವಸತಿ ಸೌಲಭ್ಯ ಕೊಡಲು ಸರ್ಕಾರದಿಂದ 10 ಕೋಟಿ ರೂ ಕೊಟ್ಟಿದ್ದೇವೆ. ಇನ್ನು ದೊಡ್ಡ ಪ್ರಮಾಣದಲ್ಲಿ 8ರಿಂದ 10 ಸಾವಿರ ಮಕ್ಕಳಿಗೆ ವಸತಿ ನೀಡಬೇಕು ಎನ್ನುವ ಗುರಿ ಸ್ವಾಮೀಜಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಭಕ್ತರು ಕೂಡ ಸಹಾಯ ಮಾಡಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ದಿವ್ಯವಾಗಿರುವ ಸೇವೆ ಪರಮಪೂಜ್ಯರು ಮಾಡುತ್ತಿದ್ದಾರೆ. ಅವರ ಆಸೆ, ಕನಸು ನನಸಾಗಲಿದೆ ಎಂದರು. ಸಚಿವರಾದ ಹಾಲಪ್ಪ ಆಚಾರ್, ಡಾ.ಕೆ.ಸುಧಾಕರ್, ಬೈರತಿ ಬಸವರಾಜ, ಸಿ.ಸಿ ಪಾಟೀಲ, ಸಂಸತ್ ಸದಸ್ಯರಾದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಸಿಎಂ ಸಿದ್ದರಾಮಯ್ಯ ಬಾಸ್ ಎಂದು ಬಂಗಾರದಲ್ಲಿ ಬರೆಸಿದ ಅಭಿಮಾನಿ, ಸಿದ್ದು ಪ್ರತಿಕ್ರಿಯೆ ಏನಿತ್ತು?