ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಕಾರಣ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರಬಾರದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸೋಮವಾರ (ಡಿಸೆಂಬರ್ 26) ದೆಹಲಿಗೆ ತೆರಳಲು ಬೊಮ್ಮಾಯಿ ನಿರ್ಧರಿಸಿದ್ದು, ಈ ಬಾರಿಯಾದರೂ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ವಿಧಾನಸಭೆ ಚುನಾವಣೆ, ಶಾಸಕರ ಅಸಮಾಧಾನ, ಮುಸುಕಿನ ಗುದ್ದಾಟ ಶಮನಗೊಳಿಸುವ ದಿಸೆಯಲ್ಲಿ ಚುನಾವಣೆಗೆ ಕೆಲವು ತಿಂಗಳು ಇದ್ದರೂ ಸಂಪುಟ ವಿಸ್ತರಣೆ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ಸಂಪುಟ ವಿಸ್ತರಣೆಗಾಗಿಯೇ ದೆಹಲಿಗೆ ತೆರಳುತ್ತಿರುವ ಬೊಮ್ಮಾಯಿ ಅವರು, ವರಿಷ್ಠರಿಗೆ ಇಷ್ಟೆಲ್ಲ ಮಾಹಿತಿ ನೀಡಿ, ಗ್ರೀನ್ ಸಿಗ್ನಲ್ ಪಡೆಯಲು ಯತ್ನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಶ್ವರಪ್ಪ, ಜಾರಕಿಹೊಳಿಗೆ ಮಂತ್ರಿಗಿರಿ ಫಿಕ್ಸ್?
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಮಂತ್ರಿಗಿರಿ ಕಳೆದುಕೊಂಡಿರುವ ಕೆ.ಎಸ್.ಈಶ್ವರಪ್ಪ ಹಾಗೂ ಲೈಂಗಿಕ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿಗೆ ಈ ಬಾರಿ ಸಚಿವ ಸ್ಥಾನ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇಬ್ಬರೂ ಪ್ರಭಾವಿಗಳು ಹಾಗೂ ಸಚಿವಾಕಾಂಕ್ಷಿಗಳು ಆಗಿರುವುದರಿಂದ ಇತ್ತೀಚೆಗೆ ಬೊಮ್ಮಾಯಿ ಅವರು ಇಬ್ಬರ ಜತೆ ಮಾತುಕತೆ ನಡೆಸಿದ್ದರು. ಹೈಕಮಾಂಡ್ ಆಣತಿಯಂತೆ ಸಚಿವ ಸ್ಥಾನ ನೀಡಲಾಗುವುದು ಎಂಬ ಭರವಸೆ ನೀಡಿದ್ದರು. ಇಬ್ಬರು ನಾಯಕರಿಗೂ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವ ಕಾರಣ ಅವರ ವರ್ಚಸ್ಸು, ಮತ ಸೆಳೆಯುವಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಲಿದ್ದಾರೆ. ಆ ಮೂಲಕ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಮೀಸಲಾತಿ ವಿಚಾರವೂ ಚರ್ಚೆ
ರಾಜ್ಯದಲ್ಲಿನ ಮೀಸಲಾತಿ ವಿಚಾರ ಕೂಡ ಹೈಕಮಾಂಡ್ ನಾಯಕರ ಗಮನಕ್ಕೆ ತರಲು ಬೊಮ್ಮಾಯಿ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪಂಚಮಸಾಲಿ, ಒಕ್ಕಲಿಗ, ಕುರುಬ ಸಮುದಾಯಗಳ ಮೀಸಲಾತಿ ಬೇಡಿಕೆ ವಿಚಾರವನ್ನು ಹೈಕಮಾಂಡ್ ಜತೆ ಚರ್ಚಿಸುವುದು ಸಹ ಭೇಟಿಯ ಆದ್ಯತೆಯಾಗಿದೆ. ಚುನಾವಣೆ, ಮೀಸಲಾತಿಗಾಗಿ ಹೋರಾಟ ಸೇರಿ ಹಲವು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ | Cabinet Berth | ಸಿಎಂ ಅವರಿಂದ ಮತ್ತೆ ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕಿದೆ: ಕೆ.ಎಸ್.ಈಶ್ವರಪ್ಪ