ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕೊನೆಗೂ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಹಾಲಿ ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ಅವರನ್ನೇ ಪೂರ್ಣಕಾಲಿಕ ಸಭಾಪತಿಯಾಗಿ ನೇಮಿಸಬೇಕೆ ಅಥವಾ ಹೊರಟ್ಟಿ ಅವರನ್ನು ಆಯ್ಕೆ ಮಾಡಬೇಕೆ ಎಂಬ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ.
ಬುಧವಾರ ನಡೆಯುವ ಚುನಾವಣೆಗೆ ಹೊರಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹೊರಟ್ಟಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಆರ್. ಅಶೋಕ್, ಗೋವಿಂದ ಎಂ. ಕಾರಜೋಳ ಸೇರಿ ಅನೇಕ ನಾಯಕರು ಸಾಥ್ ನೀಡಿದರು.
ಎಂಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ದಾಖಲೆ ನಿರ್ಮಿಸಿರುವ ಹೊರಟ್ಟಿ, ಇದೇ ಮೊದಲ ಬಾರಿಗೆ ಬಿಜೆಪಿ ಸೇರಿದ್ದರು. ಅವರನ್ನು ಸಭಾಪತಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಮಾತು ಕೊಟ್ಟಿದ್ದರು. ಆದರೆ ಆಯ್ಕೆಯಾದ ನಂತರದಲ್ಲಿ ನಡೆದ ಅಧಿವೇಶನದಲ್ಲಿ ಈ ಬಗ್ಗೆ ಚಕಾರ ಎತ್ತಿರಲಿಲ್ಲ. ರಘುನಾಥ ರಾವ್ ಮಲ್ಕಾಪೂರೆ ಅವರನ್ನೇ ಮುಂದುವರಿಸಬೇಕು ಎಂಬ ಬಿಜೆಪಿಯ ಒಂದು ವರ್ಗ ಒತ್ತಾಯ ಮಾಡುತ್ತಿತ್ತು. ಮಲ್ಕಾಪೂರೆ ಸಹ ಇತ್ತೀಚೆಗೆ ನವದೆಹಲಿಗೆ ತೆರಳಿ, ವರಿಷ್ಠರ ಮನೊಲಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಬಸವರಾಜ ಹೊರಟ್ಟಿ, ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ದಿನ. ನಾಮಪತ್ರ ಸಲ್ಲಿಕೆಗೆ ಸಿಎಂ, ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ಸೇರಿ ಅನೇಕರು ಜತೆಯಾಗಿದ್ದಾರೆ. ಈ ಹಿಂದೆ ನಾನು ಬಹಳ ಸಲ ನಾಮಪತ್ರ ಸಲ್ಲಿಸಿದ್ದೇನೆ. ಆಗ ಇಷ್ಟು ಜನರು ಬಂದಿರಲಿಲ್ಲ.
ನಾನು ಅತ್ಯಂತ ವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಎಂದೆಂದೂ ದುರುಪಯೋಗ ಮಾಡುವುದಿಲ್ಲ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕಾಯ್ದುಕೊಂಡು, ಪಕ್ಷಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬೇಕು. ಸಭಾಪತಿ ಸ್ಥಾನದಲ್ಲಿ ಕುಳಿತಾಗ ನ್ಯಾಯವಾಗಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತೇನೆ.
ತಡವಾಗಿ ಸಭಾಪತಿ ಸ್ಥಾನ ಸಿಕ್ಕಿತೇ? ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಹೋರಾಟವನ್ನೇ ಮಾಡಬೇಕಾಯಿತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ಅವರವರ ಸಮಸ್ಯೆಗಳು ಇರುತ್ತವೆ. ಅದಕ್ಕೆ ನಾನೇನೂ ಹೇಳುವುದಿಲ್ಲ. ಒಟ್ಟಾರೆ ಕೊಟ್ಟಿರುವ ಮಾತಿನಂತೆ ನಡೆದುಕೊಂಡಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ತಾಂತ್ರಿಕ ತೊಂದರೆಗಳು ಇರುತ್ತವೆ. ಸರ್ಕಾರದಲ್ಲಿ, ಪಕ್ಷದಲ್ಲಿ ತೊಂದರೆಗಳು ಇರುತ್ತವೆ. ಅವೆಲ್ಲವನ್ನೂ ಸರಿ ಪಡಿಸಿಕೊಳ್ಳಲು ಸಮಯ ಬೇಕಾಗುತ್ತದೆ. ನಾನು ಹೇಗಿದ್ದೆನೋ ಹಾಗೆಯೇ ಇದ್ದೇನೆ, ನಂಗೆ ಅತೃಪ್ತಿ ಆಗಿಲ್ಲ ಎಂದರು.
ಯಡಿಯೂರಪ್ಪಕ್ಕೆ ಕ್ರೆಡಿಟ್
ಬಸವರಾಜ ಹೊರಟ್ಟಿ ಜೆಡಿಎಸ್ ಪಕ್ಷದಿಂದಲೇ ಗೆಲ್ಲುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಬಲ ಬರುತ್ತದೆ ಎಂಬ ಕಾರಣಕ್ಕೆ ಬಿಜೆಪಿಗೆ ಕರೆತರಲಾಗಿತ್ತು. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರು ಹೊರಟ್ಟಿಯವರನ್ನು ಆಹ್ವಾನಿಸಿದ್ದರು. ಬಿಜೆಪಿಗೆ ಬಂದರೆ ಸಭಾಪತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ವರಸೆ ಬದಲಾಗಿತ್ತು.
ಕೇಂದ್ರದ ವರಿಷ್ಠರು ಹೇಳಬೇಕು, ಏನೋ ತಾಂತ್ರಿಕ ಸಮಸ್ಯೆ ಇದೆ ಎನ್ನುವುದನ್ನೇ ಕೇಳುತ್ತ, ಸ್ವತಃ ಹೊರಟ್ಟಿ ಅವರೂ ಆಪ್ತರಲ್ಲಿ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಸಭಾಪತಿ ಮಾಡುತ್ತೇವೆ ಎಂದು ಪಕ್ಷಕ್ಕೆ ಕರೆತಂದ ನಂತರ ಹೀಗೆ ಮಾಡುವುದು ಸರಿಯಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಂತರದಲ್ಲಿ ಬಿಜೆಪಿ ನಿರ್ಧಾರ ಮಾಡಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಕೊಟ್ಟ ಮಾತು ತಪ್ಪಿದರೇ ಬಿಜೆಪಿ ನಾಯಕರು?: ಬೇಸರಗೊಂಡಿರುವ ಹಿರಿಯ ನಾಯಕ ಬಸವರಾಜ ಹೊರಟ್ಟಿ