ಬೆಳಗಾವಿ: ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ’ಕ್ಕೆ (Literature Award) ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏಪ್ರಿಲ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಗುರುಪಾದ ಮರಿಗುದ್ದಿ, ಡಾ. ವಿ.ಎನ್.ಮಾಳಿ ಹಾಗೂ ಪ್ರೊ. ಸಿ.ಎಸ್.ಭೀಮರಾಯ ನಿರ್ಣಾಯಕರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಹುಬ್ಬಳ್ಳಿ: ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2021 ಮತ್ತು 2022ನೇ ಸಾಲಿನ ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಾಗಿ (Book Award) ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 3 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಇದರೊಂದಿಗೆ 2021ರ ಮತ್ತು 2022ನೇ ಸಾಲಿನ ಎರಡೂ ವರ್ಷಗಳಿಗೆ ಪ್ರತ್ಯೇಕ ಐದು ಪುಸ್ತಕಗಳಿಗೆ ಪ್ರೋತ್ಸಾಹಕ ಪ್ರಶಸ್ತಿ (ನಗದು ರಹಿತ)ಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಮತ್ತು ಗೌರವ ಸಮರ್ಪಣೆಯನ್ನು ಒಳಗೊಂಡಿರುತ್ತವೆ.
ಏಪ್ರಿಲ್, ಮೇ ನಂತರ ಬೆಳಗಾವಿಯಲ್ಲಿ ನಡೆಯುವ ಭಾವ ಸಂಗಮ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಳ್ಳುವುದು ಕಡ್ಡಾಯ. ಆದರೆ, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಹಾಜರಾಗದಿದ್ದಲ್ಲಿ ಪುರಸ್ಕೃತರ ಮನೆಗೆ ತೆರಳಿ ಪ್ರದಾನ ಮಾಡುವ, ಅಂಚೆಯಲ್ಲಿ ಕಳುಹಿಸುವ ಔಪಚಾರಿಕತೆಗೆ ಅವಕಾಶ ಇಲ್ಲ. ಅವರ ಪ್ರಶಸ್ತಿ ರದ್ದಾಗುತ್ತದೆ ಎಂದು ಫೌಂಡೇಶನ್ ತಿಳಿಸಿದೆ.
2021 ಮತ್ತು 2022ನೇ ಸಾಲಿನಲ್ಲಿ ಪ್ರಕಾಶನಗೊಂಡ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ಚುಟುಕು ಸಂಕಲನ, ಗಜಲ್ ಸಂಕಲನ, ಹಾಯ್ಕು ಸಂಕಲನ, ಟಂಕಾ ಸಂಕಲನ, ವಿಮರ್ಶಾ ಕೃತಿ, ವ್ಯಂಗ್ಯ ಚಿತ್ರ ಸಂಕಲನ, ವ್ಯಕ್ತಿಚಿತ್ರ, ಲಲಿತ ಪ್ರಬಂಧ, ಸಂಪಾದಿತ ಕೃತಿ, ಲೇಖನ ಸಂಕಲನ , ಅನುವಾದ, ಮಕ್ಕಳ ಸಾಹಿತ್ಯ ಮತ್ತು ಎಲ್ಲ ಪ್ರಕಾರದ ಕೃತಿಗಳನ್ನು (ತಲಾ 1 ಪ್ರತಿ ಮಾತ್ರ) 2023 ಏಪ್ರಿಲ್ 30ರೊಳಗೆ ತಲುಪಿಸಬೇಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
ಪುಸ್ತಕವನ್ನು ” ರಾಜೇಂದ್ರ ಪಾಟೀಲ, ನಂ.101, ಮೊದಲ ಮಹಡಿ, ಶ್ರೀ ಗುರೂಜಿ ಎನ್ಕ್ಲೇವ್ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ, ಹುಬ್ಬಳ್ಳಿ-580023 ( ಮೊ: 9148391546) ಈ ವಿಳಾಸಕ್ಕೆ ಕಡ್ಡಾಯವಾಗಿ ರಿಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕವೇ ಕಳುಹಿಸಲು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರು ಕೋರಿದ್ದಾರೆ.