Site icon Vistara News

Basavaraja Bommai : 40% ಕಮಿಷನ್‌ ತನಿಖೆ ಮಾಡಿ ಸಾಬೀತುಪಡಿಸಿ; ಸರ್ಕಾರಕ್ಕೆ ಬೊಮ್ಮಾಯಿ ಸವಾಲು

Former CM Basavaraja Bommai greets protem speaker RV Deshapande during MLAs swearing in ceremony

Former CM Basavaraja Bommai greets protem speaker RV Deshapande during MLAs swearing in ceremony

ಬೆಂಗಳೂರು: ಬಿಜೆಪಿ ಸರ್ಕಾರದ ಮೇಲಿನ 40% ಕಮಿಷನ್ (40% Commission) ಆರೋಪ ಮಾಡಿದ ಕಾಂಗ್ರೆಸ್‌ ನಾಯಕರು ಈಗ ಅದರ ಸಂಪೂರ್ಣ ತನಿಖೆ ನಡೆಸಿ ಸಾಬೀತುಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Basavaraja Bommai) ಸವಾಲ್ ಹಾಕಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ʻʻಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್‌ಗೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇ‌ನೆ. ದಯವಿಟ್ಟು ಎಲ್ಲ ತನಿಖೆ ಮಾಡಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಅವರು ಹೊರಿಸಿದ್ದಾರೆ. 40% ಭ್ರಷ್ಟಾಚಾರ ಆಗಿದೆ ಎಂದು ಅವರು ಪುರಾವೆ ಸಮೇತ ತೋರಿಸಬೇಕು. ನಾವು 40% ಕಮೀಷನ್ ತೆಗೆದುಕೊಂಡಿದ್ದೇವೆ ಎಂಬುದನ್ನು ದಾಖಲೆಸಹಿತ ತೋರಿಸಬೇಕು ಎಂದು ನಾನೂ ಆಗ್ರಹ ಮಾಡುತ್ತೇನೆʼʼ ಎಂದರು.

ಇನ್ನು 40% ಕಡಿಮೆ ಟೆಂಡರ್‌ ಹಾಕಲಿ

ʻʻಗುತ್ತಿಗೆದಾರರ ಸಂಘದವರೂ ನಮ್ಮ ಮೇಲೆ 40% ಕಮೀಷನ್ ಆರೋಪ ಮಾಡಿದ್ದರು. ಈಗ ಅವರದೇ ಸರ್ಕಾರ ಬಂದಿದೆ. ಗುತ್ತಿಗೆದಾರ ಸಂಘದವರು ಇನ್ನು ಮುಂದಿನ ಎಲ್ಲ ಟೆಂಡರ್‌ಗಳಲ್ಲೂ 40% ಕಡಿಮೆ ಹಾಕಲಿ. ಆಗ ಮಾತ್ರನಮ್ಮ ಕಾಲದಲ್ಲಿ 40% ಇತ್ತು ಅಂತ ಆಗುತ್ತದೆ. ಇವತ್ತು ಅಷ್ಟೇ ಮೊತ್ತಕ್ಕೆ ಟೆಂಡರ್ ಹಾಕಿದರೆ, 40% ಈಗಲೂ ಇದೆ ಅಂತ ಆಗುತ್ತದೆʼʼ ಎಂದರು.

ʻʻಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ಮೇಲೆ ಕೆಂಪಣ್ಣ ತಮ್ಮೆಲ್ಲ ಸಂಘದವರಿಗೂ 40% ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು. ಕೆಂಪಣ್ಣ ಇದುವರೆಗೆ 40% ದಾಖಲೆ ಕೊಡ್ಲಿಲ್ಲ, ಕೋರ್ಟ್‌ಗೂ ಕೊಡ್ಲಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡಿದ್ದಾರೆ. ನಮ್ಮ ಕಾಲದ, ಅವರ ಕಾಲದ ಎಲ್ಲವನ್ನೂ ತನಿಖೆ ಮಾಡಲಿ. ಅದರ ಜೊತೆಗೆ ಪಿಎಸ್ಐ ಪ್ರಕರಣವನ್ನೂ ತನಿಖೆ ಮಾಡಲಿ. ಎಲ್ಲ ಪ್ರಕರಣಗಳ ಸತ್ಯ ಹೊರಗೆ ಬರಲಿ. ನಾವು ಅವರ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದೀವಿʼʼ ಎಂದರು.

ಗ್ಯಾರಂಟಿ ವಿಷಯದಲ್ಲಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ

ʻʻಗ್ಯಾರಂಟಿ ಸ್ಕೀಂ ವಿಷಯದಲ್ಲಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಕಾರ್ಯಕರ್ತರು ಜನರ ಬಳಿ ಹೋಗಿ ಹೇಳಿಲ್ಲ. ಅದರ ಬಗ್ಗೆ ಯಾವುದೋ ಬ್ಯಾಂಕ್ ನಿಂದ, ಕಂಪೆನಿಯಿಂದ ಬಂದವರ ರೀತಿ ಹೋಗಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದರೆ, ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್ ಅಂತ ಹೇಳಿದ್ದಾರೆ. ಈ ತರಹ ಮೋಸ ಮಾಡಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಎಲ್ಲವೂ ಮುಂದೆ ಬೆಳಕಿಗೆ ಬರಲಿದೆʼʼ ಎಂದರು.

ಲೋಕಸಭಾ ಚುನಾವಣೆ ತಯಾರಿ; ರಾಜ್ಯ ಪ್ರವಾಸ

ʻʻಸೋಲಿನ ವಿಚಾರವಾಗಿ ಬಿಜೆಪಿ ಆತ್ಮಾವಲೋಕ ಸಭೆ ನಡೆಸಿದ್ದೇವೆ. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಮುಂದೆ ಪಕ್ಷ ಪುನರ್ ಸಂಘಟನೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ. ಚುನಾವಣೆ ಸೋಲಿಗೆ ಹಲವು ಕಾರಣಗಳನ್ನು ಕಂಡುಕೊಂಡಿದ್ದೇವೆ. ಕೆಲವು ಕಡೆ ಅಭ್ಯರ್ಥಿಗಳು ಕಾರಣ, ಕೆಲವು ಕಡೆ ಸಂಘಟನೆ ಕಾರಣ ಎನ್ನುವುದು ತಿಳಿದು ಬಂದಿದೆʼʼ ಎಂದರು.

ಬಿಬಿಎಂಪಿ ನಿರ್ಲಕ್ಷ್ಯದಿಂದ ಯುವತಿ ಸಾವಾಗಿದೆ ಎಂದ ಬೊಮ್ಮಾಯಿ

ನಗರದಲ್ಲಿ ಸುರಿದ ಕೆಲವೇ ಗಂಟೆಗಳ ಮಳೆಗೆ ಯುವತಿಯ ಸಾವಾಗಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಂತಾಗಿದೆ. ಘಟನೆ ನಡೆದ ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವರು ಮಾಡಲಿಲ್ಲ ಎಂದು ಬೊಮ್ಮಾಯಿ ಆರೋಪ ಮಾಡಿದರು.

ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ ಎಂಬ ಮುನ್ಸೂಚನೆ ಇದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಸಿಕ್ಕಾಪಟ್ಟೆ ಮರಗಳು ಬಿದ್ದಿವೆ. ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಮುಂದಿನ ಐದು ದಿನ ಹೀಗೇ ಬಿಟ್ಟರೆ ಬೆಂಗಳೂರು ಬಹಳ ಅಸ್ತವ್ಯಸ್ತ ಆಗಲಿದೆ. ಪರಿಹಾರ ಕ್ರಮಗಳನ್ನು ಆಧ್ಯತೆಯಿಂದ ಸಿಎಂ ಮಾಡಬೇಕಿದೆ. ಬಿಬಿಎಂಪಿ ಅಧಿಕಾರಿಗಳು‌ ಕೆಲಸ ಮಾಡೋರು ಮಾಡ್ತಾರೆ, ಮಾಡದಿರೋರು ಮಾಡಲ್ಲ. ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Bangalore Rain: ಬೆಂಗಳೂರಿನ ಮಹಾಮಳೆಗೆ ಕೊಚ್ಚಿ ಹೋದ ಚಿನ್ನದಂಗಡಿ; 2 ಕೋಟಿ ರೂ. ಮೌಲ್ಯದಷ್ಟು ನಷ್ಟ

Exit mobile version