ಬೆಂಗಳೂರು: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಚಿತ್ರದುರ್ಗ ಮಠದ ಡಾ.ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಿ, ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಿದ ಬೆನ್ನಲ್ಲೇ ಹಿರಿಯ ಪತ್ರಕರ್ತ, ಲೇಖಕ ಪಿ.ಸಾಯಿನಾಥ್ ಅವರು ಬಸವಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.
ಮುರುಘಾ ಮಠವು ಪ್ರತಿ ವರ್ಷ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡುತ್ತದೆ. ಅದರಂತೆ, ಪಿ. ಸಾಯಿನಾಥ್ ಅವರಿಗೆ ೨೦೧6ರಲ್ಲಿ ಬಸವಶ್ರೀ ಪ್ರಶಸ್ತಿ ನೀಡಲಾಗಿತ್ತು. “ಪೋಕ್ಸೊ ಹಾಗೂ ಎಸ್‌ಸಿ, ಎಸ್‌ಟಿ ಕಾಯಿದೆ ಅಡಿಯಲ್ಲಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿ ನಾನು ವಿಚಲಿತಗೊಂಡಿದ್ದೇನೆ. ಹಾಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿದ್ದೇನೆ” ಎಂಬುದಾಗಿ ಸಾಯಿನಾಥ್ ಘೋಷಿಸಿದ್ದಾರೆ.
“ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು. ನಾನೂ ದೌರ್ಜನ್ಯವನ್ನು ಖಂಡಿಸುತ್ತೇನೆ. ಬಸವಶ್ರೀ ಪ್ರಶಸ್ತಿ, ೫ ಲಕ್ಷ ರೂ. ನಗದನ್ನು ವಾಪಸ್ ನೀಡುತ್ತೇನೆ. ಹಾಗೆಯೇ, ಪ್ರಕರಣವು ಗಂಭೀರ ಸ್ವರೂಪ ಪಡೆಯುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಮೈಸೂರು ಮೂಲದ ಎನ್‌ಜಿಒ ಒಡನಾಡಿಯ ಶ್ರಮಕ್ಕೆ ನನ್ನ ಶ್ಲಾಘನೆ ಇದೆ” ಎಂದು ಹೇಳಿದ್ದಾರೆ.