ಬೆಳಗಾವಿ: ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ ಸಂಗ್ರಹ ಸಂಬಂಧದ 2023ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.
ತಿದ್ದುಪಡಿ ವಿಧೇಯಕ ಮಂಡಿಸಿ ಪ್ರಸ್ತಾವನೆ ಮೇಲೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಬಿಬಿಎಂಪಿ ವ್ಯಾಪ್ತಿಯ ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ ಸಂಗ್ರಹಕ್ಕೆ 2015 ರಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆ ಸುತ್ತೋಲೆ ಸರಿಯಿಲ್ಲ ಎಂದು ಸಾರ್ವಜನಿಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಲೋಪವನ್ನು ಸರಿಪಡಿಸಲು 2021ರಲ್ಲಿ ತಿದ್ದುಪಡಿ ತಂದು ಆದೇಶ ಕೂಡ ಮಾಡಲಾಯಿತು. 2022ರ ಜ.13ರಂದು ರೆಟ್ರಾಸ್ಪೆಕ್ಟಿವ್ ಅಫೆಕ್ಟ್ ಮೂಲಕ ಬರಬೇಕು ಎಂದು ಮತ್ತೊಂದು ಕಾನೂನು ಮಾಡಲಾಗಿತ್ತು ಎಂದು ಹೇಳಿದರು.
ಈ ವೇಳೆ ಸುತ್ತೋಲೆಗೆ ತಡೆ ನೀಡಿದ್ದ ಹೈಕೋರ್ಟ್ “ಸುತ್ತೋಲೆಯ ಮೂಲಕ ಕಟ್ಟಡ ಪರವಾನಿಗೆ ಶುಲ್ಕ ಸಂಗ್ರಹ ನಿಯಮದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿತ್ತು. ಜತೆಗೆ ಈ ತಿದ್ದುಪಡಿಯನ್ನು ಅರ್ಜಿದಾರರು ಹೈಕೋರ್ಟಿನಲ್ಲಿ ಪ್ರಶ್ನಿಸುವುದಲ್ಲದೇ, ಮರುಪರಿಶೀಲನೆ ಅರ್ಜಿ ಕೂಡ ಹಾಕಿದ್ದರು.
ಇದನ್ನೂ ಓದಿ | BJP Protest: 25 ದಿನದಲ್ಲಿ ರೈತರ ಸಾಲ ಮನ್ನಾ ಮಾಡಿ; ರಾಜ್ಯ ಸರ್ಕಾರಕ್ಕೆ ಬಿಎಸ್‌ವೈ ಗಡುವು
ಈ ತಿದ್ದುಪಡಿ ಆಧಾರದ ಮೇಲೆ ಸರ್ಕಾರವು 2015 ರ ಮಾರ್ಚ್ ತಿಂಗಳಿನಿಂದ 2023ರ ತನಕ 1,712 ಕೋಟಿ ರೂ. ಸಂಗ್ರಹ ಮಾಡಿದೆ. 688 ಕೋಟಿ ರೂ. ಸಂಗ್ರಹ ಬಾಕಿಯಿದೆ. 2022ರ ಜ. 13ರಂದು ಹೊರಡಿಸಿದ್ದ ಈ ಸುತ್ತೋಲೆಯಲ್ಲಿ ಒಂದಷ್ಟು ಲೋಪಗಳು ಕಂಡುಬಂದಿತ್ತು. ಈ ಕಾರಣದಿಂದ ಪ್ರಕರಣವು ಹೈಕೋರ್ಟಿನಲ್ಲಿ ಸರ್ಕಾರದ ಕೈ ಬಿಟ್ಟು ಹೋಗಿತ್ತು. ಹೀಗಾಗಿ 1,712 ಕೋಟಿ ರೂ.ಗಳನ್ನು ಅರ್ಜಿದಾರರಿಗೆ ಮರಳಿ ನೀಡಬೇಕಾಗಿದೆ. ಈ ಹಣವನ್ನು ಉಳಿಸಿಕೊಳ್ಳುವ ಸಲುವಾಗಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಬೇಕಾಗಿದೆ.
ನೆಲ ಬಾಡಿಗೆ, ನಿಗಧಿತ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ, ಮತ್ತು ಲೆವಿ ಶುಲ್ಕ ವಿಚಾರವಾಗಿ ಒಂದಷ್ಟು ವ್ಯಾಖ್ಯಾನಗಳಿಗೆ ಸ್ಪಷ್ಟತೆ ನೀಡಬೇಕು ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಆದ ಕಾರಣ ಈ ತಿದ್ದುಪಡಿಯಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಡಿಸಿಎಂ ವಿವರಿಸಿದರು.
ಕಟ್ಟಡ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ, ನೆಲ ಬಾಡಿಗೆ ಸೇರಿದಂತೆ ಇತರೆ ಶುಲ್ಕಗಳನ್ನು ಹೆಚ್ವಳ ಮಾಡಬೇಡಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಅಶ್ವತ್ಥನಾರಾಯಣ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಬಿಬಿಎಂಪಿ ವ್ಯಾಪ್ತಿಯ ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ ಹೆಚ್ಚಳದ ಆಲೋಚನೆ ಸರ್ಕಾರದ ಮುಂದೆ ಇಲ್ಲ. ಹೀಗಾಗಿ ನಾವು ಶುಲ್ಕ ಹೆಚ್ಚಳ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಹಿಂದಿನ ಸರ್ಕಾರ ಕೇವಲ ಸುತ್ತೋಲೆಯ ಅಡಿಯಲ್ಲಿ ಶುಲ್ಕ ಸಂಗ್ರಹ ಮಾಡಿದ ಕಾರಣ ಹೈಕೋರ್ಟ್ ಈ ಸುತ್ತೋಲೆಗೆ ತಡೆ ನೀಡಿ, ಕಾನೂನು ರೂಪಿಸಿ ಹೆಚ್ಚಳ ಮಾಡಿದ ಶುಲ್ಕವನ್ನು ಸಂಗ್ರಹಿಸಬೇಕೆ ಹೊರತು ಸುತ್ತೋಲೆಯ ಮೇಲೆ ಶುಲ್ಕ ಪಡೆಯುವಂತಿಲ್ಲ ಎಂದಿತ್ತು.
ಇದನ್ನೂ ಓದಿ | Security breach : ಕಾಂಗ್ರೆಸ್ ಸಂಸದರು ಪಾಸ್ ಕೊಡ್ತಿದ್ದರೆ ಏನೆಲ್ಲಾ ಮಾಡ್ತಿದ್ರಿ; ಡಿಕೆಶಿ ಪ್ರಶ್ನೆ
ಆಗ ಯುಡಿಯೂರಪ್ಪ ಅವರು ಮತ್ತು ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿ ವಿಧೇಯಕವನ್ನು ಇದೇ ಸದನದಲ್ಲಿ ಪಾಸ್ ಮಾಡಿದ್ದರು. 2021ರಲ್ಲಿ ನಿಮ್ಮಿಂದಲೇ (ಆರ್.ಅಶೋಕ) ಕಾನೂನು ಜಾರಿಗೆ ತರಲಾಯಿತು. ಶುಲ್ಕ ಕಡಿಮೆ ಮಾಡುವ ಇರಾದೆ ಸರ್ಕಾರಕ್ಕೆ ಇದೆಯೇ ಹೊರತು, ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ” ಎಂದು ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.