ಬೆಂಗಳೂರು: ಬಿಬಿಎಂಪಿ 2023-24ನೇ ಸಾಲಿನ ಆಯವ್ಯಯ (BBMP Budget 2023) ಮಂಡನೆಯನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ನಗರದ ಟೌನ್ ಹಾಲ್‌ನಲ್ಲಿ ಗುರುವಾರ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ವರ್ಷದ ಬಜೆಟ್ ಗಾತ್ರ ದೊಡ್ಡದಾಗಿದ್ದು, 11,158 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ.
ನಗರದಲ್ಲಿ ಕಾರ್ಪೋರೇಟರ್‌ಗಳಿಲ್ಲದೆ ಬಿಬಿಎಂಪಿ ಆಡಳಿತಾಧಿಕಾರಿಗಳೇ ಸತತ 3ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ನಗರದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಮಹತ್ವ ನೀಡಲಾಗಿದ್ದು, ಜತೆಗೆ ಮಹಿಳೆಯರಿಗೆ ಅನುಕೂಲವಾಗುವಂತಹ ಕೆಲ ಹೊಸ ಯೋಜನೆಗಳಿಗೂ ಕೈ ಹಾಕಲಾಗಿದೆ. ಕೆಲವು ಹೊಸ ಯೋಜನೆಗಳ ಹೊರತುಪಡಿಸಿ ಉಳಿದ ಎಲ್ಲ ಯೋಜನೆಗಳೂ ಹಳೆಯದ್ದೇ ಇದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಅಂಶವನ್ನು ವಿಶೇಷ ಆಯುಕ್ತರು ಉಲ್ಲೇಖಿಸಿದ್ದಾರೆ.
ಇಲಾಖೆಗಳಿಗೆ ಅನುದಾನ ಹಂಚಿಕೆ ಪ್ರಮಾಣ ಹೀಗಿದೆ
ಕೌನ್ಸಿಲ್- 13.25 ಕೋಟಿ ರೂ.
ಸಾಮಾನ್ಯ ಆಡಳಿತ- 602.42 ಕೋಟಿ ರೂ.
ಕಂದಾಯ- 524.69 ಕೋಟಿ ರೂ.
ನಗರ ಯೋಜನೆ-ನಿಯಂತ್ರಣ- 72.69 ಕೋಟಿ ರೂ.
ಸಾರ್ವಜನಿಕ ಕಾಮಗಾರಿ- 7103.53 ಕೋಟಿ ರೂ.
ಘನತ್ಯಾಜ್ಯ ನಿರ್ವಹಣೆ- 1643.72 ಕೋಟಿ ರೂ.
ಸಾರ್ವಜನಿಕ ಆರೋಗ್ಯ- 241.30 ಕೋಟಿ ರೂ.
ತೋಟಗಾರಿಕೆ- 129.85 ಕೋಟಿ ರೂ.
ನಗರ ಅರಣ್ಯೀಕರಣ- 57.15 ಕೋಟಿ ರೂ.
ಸಾರ್ವಜನಿಕ ಶಿಕ್ಷಣ- 152.61 ಕೋಟಿ ರೂ.
ಸಮಾಜ ಕಲ್ಯಾಣ- 513.16 ಕೋಟಿ ರೂ.
ಯಾವುದಕ್ಕೆ ಎಷ್ಟು ಅನುದಾನ?
ಅಮೃತ್ ನಗರೋತ್ಥಾನ ಯೋಜನೆಯಡಿ 6000 ಕೋಟಿ ರೂ. ವೆಚ್ಚದಲ್ಲಿ 2,146 ಕಿ.ಮೀ. ರಸ್ತೆ ಅಭಿವೃದ್ಧಿ, ನಗರದಲ್ಲಿರುವ 67 ಕೆರೆಗಳ ಅಭಿವೃದ್ಧಿ, 11 ಹೊಸ ಪಾರ್ಕ್‌ಗಳ ನಿರ್ಮಾಣ, 42 ಹೊಸ ಶಾಲಾ ಕಟ್ಟಡಗಳ ನಿರ್ಮಾಣ, 26 ಹಳೆಯ ಶಾಲಾ ಕಟ್ಟಡಗಳ ನವೀಕರಣ, 84 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನವೀಕರಣವನ್ನು ಮಾಡಲು ನಿರ್ದರಿಸಲಾಗಿದೆ. 873 ಕೋಟಿ ರೂಪಾಯಿಯನ್ನು 2,558 ಕಾಮಗಾರಿಗಳ ನಿರ್ವಹಣೆಗೆ ಮೀಸಲಿಡಲಾಗಿದೆ. 273 ಕೋಟಿ ರೂ. ವೆಚ್ಚದಲ್ಲಿ ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣ ಹಾಗೂ 1920 ಕೋಟಿ ರೂ. ವೆಚ್ಚದಲ್ಲಿ 195 ಕಿ.ಮೀ ರಾಜಕಾಲುವೆ ನಿರ್ವಹಣೆ, 200 ಕೋಟಿ ರೂ. ವೆಚ್ಚದಲ್ಲಿ 67 ಕೆರೆಗಳ ಅಭಿವೃದ್ಧಿ ಹಾಗೂ 15 ಕೋಟಿಯಲ್ಲಿ ಕೆರೆಗಳ ರಕ್ಷಣೆ, 1410 ಕೋಟಿ ವೆಚ್ಚದಲ್ಲಿ 150 ಕಿ.ಮೀ. ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ನಗರದ 75 ಜಂಕ್ಷನ್‌ಗಳ ಅಭಿವೃದ್ಧಿಗೆ 150 ಕೋಟಿ ರೂ. ಮೀಸಲಿಡಲಾಗಿದ್ದು, 9 ಹೊಸ ಕಾಮಗಾರಿಗೆ 965 ಕೋಟಿ ರೂ. ಕಾಯ್ದಿರಿಸಲಾಗಿದೆ.
ಕಟ್ಟಡ ನಕ್ಷೆಗಳ ಡಿಜಟಲೀಕರಣಕ್ಕಾಗಿ 2 ಕೋಟಿ ರೂ. ಮೀಸಲಿಟ್ಟಿದ್ದರೆ, ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ಒಟ್ಟು 8 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅನಧಿಕೃತ ಕಟ್ಟಡ ತೆರವುಗೊಳಿಸಲು 10 ಕೋಟಿ ರೂ., ಕಸಾಯಿಖಾನೆಗಳ ನಿರ್ವಹಣೆಗಾಗಿ 1 ಕೋಟಿ ರೂ. ಹಾಗೂ ಚಿತಾಗಾರಗಳ/ ರುದ್ರಭೂಮಿ ನಿರ್ವಹಣೆಗಾಗಿ 7.74 ಕೋಟಿ ರೂ. ಮೀಸಲಿಡಲಾಗಿದೆ. ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ 60.10 ಕೋಟಿ ರೂ. ಹಾಗೂ ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ 23.11 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ಗುಂಡಿ ಮುಚ್ಚಲು ಪ್ರತಿ ವಾರ್ಡ್‌ಗೆ 15ಲಕ್ಷ ರೂ.
ವಾರ್ಡ್‌ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ 75 ಲಕ್ಷ ರೂಪಾಯಿಯಂತೆ ಒಟ್ಟಾರೆ 182.25 ಕೋಟಿ ರೂ. ಮೀಸಲಿಡಲಾಗಿದೆ. ಪ್ರಮುಖವಾಗಿ ಪ್ರತಿ ವಾರ್ಡ್‌ಗೆ ಹೂಳೆತ್ತುವ ಕಾಮಗಾರಿಗಳಿಗೆ 30 ಲಕ್ಷ ರೂ., ಗುಂಡಿ ಮುಚ್ಚುವ ಕಾಮಗಾರಿಗಳಿಗೆ 15 ಲಕ್ಷ ರೂ., ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ 25 ಲಕ್ಷ ರೂ. ಹಾಗೂ ಮಾನ್ಸೂನ್ ನಿರ್ವಹಣೆಗಾಗಿ 5 ಲಕ್ಷ ರೂ. ಮೀಸಲಿಡಲಾಗಿದೆ. ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿ ರೂ., ತುರ್ತು ಮಾನ್ಸೂನ್ ಕಾಮಗಾರಿಗಾಗಿ 15 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಹೊಸ ವಲಯಗಳಿಗೆ 2 ಕೋಟಿ ರೂ. ಹಾಗೂ ಹಳೇ ವಲಯಗಳಿಗೆ 1 ಕೋಟಿ ರೂ. ಮೀಸಲಿಡಲಾಗಿದೆ.
ಕೆರೆ ಸಂರಕ್ಷಣೆಗೂ ಒತ್ತು
ಬೀದಿ ದೀಪಗಳ ನಿರ್ವಹಣೆಗಾಗಿ 38 ಕೋಟಿ ರೂ., ಕೆರೆಗಳ ನಿರ್ವಹಣೆಗಾಗಿ ಈ ಬಾರಿಯ ಬಜೆಟ್‌ನಲ್ಲಿ 35 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗಾಗಿ 100 ಕೋಟಿ ರೂ., ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗಾಗಿ 40 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇನ್ನು ಹೊಸದಾಗಿ ರಚನೆಯಾದ ವಾರ್ಡ್‌ಗಳ ಕಚೇರಿ ನಿಮಾಣಕ್ಕಾಗಿ 12 ಕೋಟಿ ರೂ., ವಲಯ ಕಟ್ಟಡಗಳಿಗಾಗಿ 10 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಉಳಿದಂತೆ ವಿವಿದ್ಧೋದ್ದೇಶ ಎಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ 25 ಕೋಟಿ ರೂ., ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗಾಗಿ 5 ಕೋಟಿ ರೂ., ಅಂಗನವಾಡಿಗಳ ನಿರ್ಮಾಣಕ್ಕಾಗಿ 4.50 ಕೋಟಿ ರೂ. ಹಾಗೂ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ 10 ಕೋಟಿ ರೂ., ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆ್ಯಂಟಿ ರೇಬಿಸ್ ಕೇಂದ್ರ ಸ್ಥಾಪನೆಗಾಗಿ 5 ಕೋಟಿ ರೂ. ಮೀಸಲಿಡಲಾಗಿದೆ. ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 2.5 ಕೋಟಿ ರೂ., ಹೊಸ ಉದ್ಯಾನವನಗಳ ಅಭಿವೃದ್ಧಿಗಾಗಿ 15 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಹೊಸ ಚಿತಾಗಾರಗಳ ನಿರ್ಮಾಣಕ್ಕಾಗಿ 30 ಕೋಟಿ ರೂ., ಪ್ರಾಣಿಗಳ ಹೊಸ ಚಿತಾಗಾರಗಳ ನಿರ್ಮಾಣಕ್ಕಾಗಿ 5 ಕೋಟಿ ರೂ., ಕೆರೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ., ಅಂಡರ್ ಗ್ರೌಂಡ್ ಪಾರ್ಕಿಂಗ್ ನಿರ್ಮಾಣಕ್ಕಾಗಿ 5 ಕೋಟಿ ರೂ., 75 ಜಂಕ್ಷನ್‌ಗಳ ಅಭಿವೃದ್ಧಿಗಾಗಿ 150 ಕೋಟಿ ರೂ. ಜತೆಗೆ ಪ್ರತಿ ವಾರ್ಡಗೆ 1.50 ಕೋಟಿ ರೂಪಾಯಿಗಳಂತೆ ವಾರ್ಡ್ ಕಾಮಗಾರಿಗಳಿಗಾಗಿ ಒಟ್ಟು 303.75 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ದಾಸರಹಳ್ಳಿ ವಲಯದಲ್ಲಿ ಬೃಹತ್ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ 5 ಕೋಟಿ ರೂ., ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್‌ಗಳಿಗಾಗಿ ಒಟ್ಟು 17.25 ಕೋಟಿ ರೂ. ಇದ್ದು, ಇದರಲ್ಲಿ ಹೊಸ ವಲಯದ ಪ್ರತಿ ವಾರ್ಡ್‌ಗೆ 10 ಲಕ್ಷ ರೂ., ಹಳೆ ವಲಯದ ಪ್ರತಿ ವಾರ್ಡ್‌ಗೆ 5 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ಸ್ವಾತಂತ್ರ್ಯ ಉದ್ಯಾನವನ (Freedom Park) ದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ 5 ಕೋಟಿ ರೂ., 110 ಹಳ್ಳಿಗಳಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ 6 ಕೋಟಿ ರೂ., ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ 24 ಕೋಟಿ ರೂ. ಹಾಗೂ ಒಂಟಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಸಹಾಯಧನ ನೀಡಲು ಒಟ್ಟು 100 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
ಲ್ಯಾಪ್‌ಟಾಪ್‌ಗಳ ವಿತರಣೆಗಾಗಿ 25 ಕೋಟಿ ರೂ., ಹೊಲಿಗೆ ಯಂತ್ರಗಳ ವಿತರಣೆಗಾಗಿ 9 ಕೋಟಿ ರೂ., ವೃದ್ಧಾಶ್ರಮಗಳಿಗಾಗಿ 16 ಕೋಟಿ ರೂ., ವಿದ್ಯಾರ್ಥಿ ವೇತನ ನೀಡಲು 5 ಕೋಟಿ ರೂ. ಹಾಗೂ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ 700 ಕೋಟಿ ರೂ.ಗಳ ಸಹಾಯನುದಾನ, ಬೀದಿ ನಾಯಿಗಳ ನಿರ್ವಹಣೆಗಾಗಿ 20 ಕೋಟಿ ರೂ., ಇಂದಿರಾ ಕ್ಯಾಂಟೀನ್‌ಗಾಗಿ 50 ಕೋಟಿ ರೂ., ಬೆಂಗಳೂರು ಆರೋಗ್ಯ ವ್ಯವಸ್ಥೆಗಾಗಿ 2 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: Viral News : ಕಚ್ಚಾ ಬಾದಾಮ್ ಗಾಯಕನಿಗೆ ಮೋಸ; ಕಾಪಿರೈಟ್ಸ್ ವಿಚಾರದಲ್ಲಿ ದೂರು ದಾಖಲಿಸಿದ ಭುಬನ್
ಮರಗಳ ಗಣತಿಗಾಗಿ 4 ಕೋಟಿ ರೂ., ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ 7.5 ಕೋಟಿ ರೂ. ಹಾಗೂ Tree canopy ನಿರ್ವಹಣೆಗಾಗಿ 14 ಕೋಟಿ ರೂ., ಹೈ-ಟೆಕ್ ನರ್ಸರಿಗಳಿಗಾಗಿ 8 ಕೋಟಿ ಹಂಚಿಕೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳ ಸಮವಸ್ತ್ರ, ಶೂ ನೀಡಲು 25 ಕೋಟಿ, ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ. ಮೀಸಲಿಡಲಾಗಿದೆ.
ಇದು ವಾಸ್ತವದ ಬಜೆಟ್ ಅಲ್ಲ
ಬಿಬಿಎಂಪಿ ಮಂಡಿಸಿರುವ ಬಜೆಟ್ ಸತ್ಯದಿಂದ ದೂರವಿದೆ. ಕಾರ್ಪೊರೇಟರ್‌ಗಳಿಲ್ಲದ ಕಾರಣ ಪಾಲಿಕೆಯ ಒಳಗೆ ಏನಾಗುತ್ತಿದೆ ಎಂದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ತಮಗೆ ಬೇಕಾದಂತಹ ಲೆಕ್ಕಗಳನ್ನು ತೋರಿಸಿಕೊಂಡು ವಾಸ್ತವಕ್ಕೆ ದೂರವಾದ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷದ ಬಜೆಟ್‌ನಲ್ಲಿ ಎಷ್ಟು ಉಳಿತಾಯವಾಗಿದೆ? ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಬಿಬಿಎಂಪಿ ಲೆಕ್ಕ ಹಾಕಿದರೆ ಸಾಕು, ಇದು ವಾಸ್ತವದ ಬಜೆಟ್ ಅಲ್ಲ ಎಂಬುದು ಅರಿವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ