ಬೆಂಗಳೂರು: ರಾಜಕಾಲುವೆ ಮೇಲೆ ಒತ್ತುವರಿ (Rajakaluve Encroachment) ಮಾಡಿ ಅಕ್ರಮವಾಗಿ ಒಂದಿಂಚು ಕಟ್ಟಿಕೊಂಡಿದ್ದರೂ ಅದನ್ನು ತೆರವು ಮಾಡುವುದಾಗಿ ಹೇಳಿ ಬಿಬಿಎಂಪಿ (BBMP) ಅನೇಕ ಜನರ ಮನೆಗಳನ್ನು ಉರುಳಿಸಿದೆ. ಬಲಾಢ್ಯರ ಮನೆಗಳತ್ತ ಸುಳಿಯದೆ ಇರುವ ಪಾಲಿಕೆ, ಚೀಫ್ ಇಂಜಿನಿಯರ್ ಒಬ್ಬರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಗರದ ಆರ್.ಟಿ ನಗರ ಪೋಸ್ಟ್‌ನಲ್ಲಿರುವ ಆನಂದನಗರದಲ್ಲಿ ಪಾಲಿಕೆಯ ಮುಖ್ಯ ಆಯುಕ್ತ ಬಿ.ಎಸ್.ಪ್ರಹಲ್ಲಾದ್ ಮನೆ ನಿರ್ಮಿಸಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಪ್ರಹಲ್ಲಾದ್, ಕೆಲ ವರ್ಷಗಳ ಹಿಂದಷ್ಟೇ ರಾಜಕಾಲವೆಯ ಬಫರ್ ಜೋನ್‌ನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಮಾತ್ರವಲ್ಲ, ಸೂಪರ್ ಮಾರ್ಕೆಟ್ ನಡೆಸಲು ಕೂಡ ಅವರ ಜಾಗವನ್ನು ಬಾಡಿಗೆಗೆ ಬಿಟ್ಟಿದ್ದಾರೆ. ಜನಸಾಮಾನ್ಯರು ಸಣ್ಣ ಪುಟ್ಟ ಒತ್ತುವರಿ ಮಾಡಿಕೊಂಡರೆ ಜೆಸಿಬಿ ಮೂಲಕ ಕ್ಷಣಾರ್ಧದಲ್ಲಿ ತೆರವು ಮಾಡುವ ಪಾಲಿಕೆ, ಈಗ ಇವರ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತೋರಿಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಗೊತ್ತೇ ಇಲ್ಲ- ಆಯುಕ್ತ ತುಷಾರ್ ಗಿರಿನಾಥ್
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಕುರಿತು ತಮಗೆ ಯಾವುದೆ ಮಾಹಿತಿಯಿಲ್ಲ. ಯಾರಾದರೂ ಮೊದಲೇ ದೂರು ಕೊಟ್ಟಿದ್ದರೆ, ಅದರಲ್ಲಿರುವ ಅಂಶವನ್ನು ಪರಿಶೀಲಿಸಲಾಗುವುದು ಎಂದರು.
ತಪ್ಪಾಗಿದ್ದರೆ ಪರಿಶೀಲಿಸಲಿ- ಪ್ರಹಲ್ಲಾದ್
ತಮ್ಮ ವಿರುದ್ಧದ ಆರೋಪಕ್ಕೆ ಖುದ್ದು ಪ್ರತಿಕ್ರಿಯಿಸಿರುವ ಸಿಇ ಪ್ರಹಲ್ಲಾದ್, ನಾನು ಮನೆ ಕಟ್ಟುವಾಗ ಬಿಡಿಎ ಅನುಮೋದನೆ ತೆಗೆದುಕೊಂಡೆ ಕಟ್ಟಿರುವುದು. ನಾನು ಸರ್ಕಾರಿ ಅಧಿಕಾರಿ ನನ್ನಿಂದ ಏನೂ ತಪ್ಪಾಗಿಲ್ಲ. ತಪ್ಪಾಗಿದ್ದರೂ ಅದನ್ನು ಸಂಬಂಧಪಟ್ಟ ಇಲಾಖೆ ಪರಿಶೀಲನೆ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ: Hoysala Police: ಜಸ್ಟ್ 6 ತಿಂಗಳಲ್ಲಿ 500ಕ್ಕೂ ಹೆಚ್ಚು ದೂರು; ಕಾಲು ಗಂಟೆಯಲ್ಲೇ ಕಾಲ್ಕೀಳಬೇಕು ಹೊಯ್ಸಳ ಪೊಲೀಸರು!
ಹೋರಾಟದ ಎಚ್ಚರಿಕೆ
ಮಹದೇವಪುರ, ಕೆ.ಆರ್ ಪುರದಲ್ಲಿರುವ ಜನಸಾಮಾನ್ಯರ ಅಕ್ರಮ ಕಟ್ಟಡಗಳನ್ನು ತೆರವು ಮಾಡಲು ಪಾಲಿಕೆಗೆ ಸಮಸ್ಯೆ ಇರಲಿಲ್ಲ. ಆದರೆ ಪ್ರಭಾವಿಗಳ ಕಟ್ಟಡಗಳನ್ನು ಮುಟ್ಟಲು ಪಾಲಿಕೆ ಇಂದಿಗೂ ಕೂಡ ಮನಸ್ಸು ಮಾಡಿಯೇ ಇಲ್ಲ. ಹೀಗಿರುವಾಗ ಯಾವುದೇ ಕಾರಣಕ್ಕೂ ಪ್ರಹಲ್ಲಾದ್ ಅವರ ಮನೆಯನ್ನು ಕೆಡುವುದಲ್ಲ, ಟಚ್ ಕೂಡ ಮಾಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರ ಅಮರೇಶ್ ವ್ಯಂಗ್ಯ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ಮಾಡದೆ ಇದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ