Site icon Vistara News

BBMP ನೂತನ ಮುಖ್ಯ ಆಯುಕ್ತರಿಂದ ಸಿಟಿ ರೌಂಡ್ಸ್‌: ಕಾಮಗಾರಿಗಳ ಪರಿಶೀಲಿಸಿದ ತುಷಾರ್‌ ಗಿರಿನಾಥ್‌

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾಗಿ ನೇಮಕಗೊಂಡಿರುವ ತುಷಾರ್‌ ಗಿರಿನಾಥ್‌ ಅವರು ಇಂದು ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸೇರಿ ಪೂರ್ವ ವಲಯ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.  ಪ್ರಾರಂಭದಲ್ಲಿ ಪೌರಕಾರ್ಮಿಕರ ಮಸ್ಟರಿಂಗ್‌ ಪಾಯಿಂಟ್‌ಗೆ ಭೇಟಿ ನೀಡಿದ ಅವರು, ಕಾರ್ಮಿಕರೊಟ್ಟಿಗೆ ಮಾತುಕತೆ ನಡೆಸಿದರು. ಹಾಜರಾತಿ ಪರಿಶೀಲನೆ ಮಾಡಿದ್ದಲ್ಲದೆ, ಗೈರಾಗಿರುವ ಪೌರ ಕಾರ್ಮಿಕ ಬಗ್ಗೆ ವಿಚಾರಿಸಿದರು. ಎಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಪೌರಕಾರ್ಮಿಕರೊಂದಿಗೆ ಚಹಾ ಸೇವನೆ ಮಾಡಿದ್ದಾರೆ. ಅಲ್ಲಿಂದ ಜೆ.ಸಿ.ನಗರ ವಾರ್ಡ್‌ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್‌ ಮಸ್ಟರಿಂಗ್‌ ಪಾಯಿಂಟ್‌ಗೆ ಭೇಟಿ ನೀಡಿದರು. ಅಲ್ಲಿ ಜಿಪಿಎಸ್‌ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದನ್ನು ಗಮನಿಸಿ, ಕೂಡಲೇ ಸರಿಪಡಿಸಲು ಸೂಚಿಸಿದರು. ಹಾಗೇ, ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌ ವಾಹನಗಳು ಪ್ರತಿದಿನ ಚಲಿಸುವ ಬಗ್ಗೆ ನಿಗಾವಹಿಸಬೇಕು ಮತ್ತು ಆ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಸ ಸುರಿಯುವ ಸ್ಥಳ ಪರಿಶೀಲನೆ

ನಂತರ ಆಯುಕ್ತರು ದೇವೇಗೌಡ ಮುಖ್ಯರಸ್ತೆಯಲ್ಲಿರುವ ಕಸ ಸುರಿಯುವ ಸ್ಥಳವನ್ನು ಪರಿಶೀಲನೆ ಮಾಡಿದರು. ಇಲ್ಲಿಂದ ಪ್ರತಿದಿನವೂ ಕಸ ತೆಗೆಯಲಾಗುತ್ತಿದೆಯೇ ಎಂದು ಸ್ಥಳೀಯ ನಿವಾಸಿಗಳ ಬಳಿ ವಿಚಾರಣೆ ನಡೆಸಿದರು. ಹಾಗೇ, ರಸ್ತೆಯಲ್ಲಿ ಕಸ ಸುರಿಯುವವರ ಬಗ್ಗೆ ಗಮನಹರಿಸಬೇಕು. ಇಲ್ಲೆಲ್ಲ ಕೆಲವು ನಿವಾಸಿಗಳು ತಮ್ಮ ಮನೆಗೆ ಸಿಸಿಟಿವಿ ಅಳವಡಿಸಿಕೊಂಡಿದ್ದಾರೆ. ಒಂದಷ್ಟು ಕಚೇರಿ, ಅಂಗಡಿಗಳ ಬಳಿಯೂ ಸಿಸಿಟಿವಿ ಕ್ಯಾಮರಾಗಳಿವೆ. ಅವುಗಳ ದೃಶ್ಯಾವಳಿಯನ್ನು ಪಡೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು

ಹೆರಿಗೆ ಆಸ್ಪತ್ರೆ ಸುತ್ತಲೂ ಗಲೀಜು

ಆಯುಕ್ತ ತುಷಾರ್‌ ಅವರು ಮುನಿರೆಡ್ಡಿ ಪಾಳ್ಯದ ಬಿಬಿಎಂಪಿ ಹೆರಿಗೆ ಆಸ್ಪತ್ರೆ ಸುತ್ತಲೂ ಕಾಲುವೆಗಳು ಸ್ವಚ್ಛವಿಲ್ಲದೆ ಇರುವುದನ್ನು ನೋಡಿ, ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಿಸಿದರು. ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತಲು ವಾರ್ಷಿಕ ನಿರ್ವಹಣಾ ಗುತ್ತಿಗೆ ನೀಡಿದ್ದು, ಆ ಪ್ರಕ್ರಿಯೆಯು ಸಕ್ರಿಯವಾಗಿ ನಡೆದು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದುಹೋಗಲು ಅನುವಾಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ನಂತರ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಪೌರ ಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಪರಿಶೀಲಿಸಿ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಇಲ್ಲದಿರುವುದನ್ನು ಕಂಡು ಕೂಡಲೆ ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಕೊಠಡಿ(ಸುವಿಧಾ ಕ್ಯಾಬಿನ್)ಯನ್ನು 7 ದಿನದೊಳಗಾಗಿ ಸ್ಥಾಪಿಸಲು ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದರು. ಅಲ್ಲಿಯವರೆಗೆ ಆಸ್ಪತ್ರೆಯ ಶೌಚಾಲಯವನ್ನು ಪೌರಕಾರ್ಮಿಕರು ಉಪಯೋಗಿಸಲು ಅನುವು ಮಾಡಿಕೊಡಬೇಕೆಂದು ಆಸ್ಪತ್ರೆಯ ವೈದ್ಯಾಧಿಕಾರಿಗೆ ತಿಳಿಸಿದರು. ಇದೇ ವೇಳೆ ಪೌರಕಾರ್ಮಿಕರಿಗೆ ನೀಡುವ ಸುರಕ್ಷಾ ಸಮಾಗ್ರಿಗಳು, ಸಮವಸ್ತ್ರಗಳನ್ನು ಸರಿಯಾದ ಸಮಯಕ್ಕೆ  ನೀಡಲು ಸೂಚಿಸಿದರು.

ಕೂಡಲೆ ಆಸ್ಪತ್ರೆ ಪ್ರಾರಂಭಿಸಿ

ಮುನಿರೆಡ್ಡಿ ಪಾಳ್ಯದ ಹೆರಿಗೆ ಆಸ್ಪತ್ರೆಯನ್ನು ನೂತನವಾಗಿ ನವೀಕರಿಸಲಾಗಿದ್ದು ಕಟ್ಟಡ ಕಾಮಗಾರಿ ಪೂರ್ಣಗೊಂಡಿರುತ್ತದೆ. ಆದರೆ, ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಬೇಕು. ಈ ಪೈಕಿ ಅವುಗಳನ್ನು ಪರಿಕ್ಷೀಸಿ ಸೇವೆಗೆ ಸಿದ್ಧಪಡಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದರು. ಅಲ್ಲದೆ ಹೊರ ರೋಗಿಗಳಿಗೆ ಕೂಡಲೆ ಸೇವೆ ನೀಡುವಂತೆ ಆದೇಶಿಸಿದರು. ಗಂಗಾನಗರದಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಆ ಬಳಿಕ ಆರ್.ಟಿ.ನಗರ ಸಾಯಿಮಂದಿರದ ಬಳಿ ದ್ವಿತೀಯ ರಾಜಕಾಲುವೆಯನ್ನು ಪರಿಶೀಲಿಸಿ ಹೂಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ | ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಅನುಷ್ಟಾನವಾಗಲಿ: ಬೆಂಗಳೂರು ಸಂಚಾರ ಪೊಲೀಸರಿಗೆ ನಾಗಾಭರಣ ಸೂಚನೆ

ಹೆಣ್ಣೂರು ರಸ್ತೆ ಅಭಿವೃದ್ಧಿ ಪರಿಶೀಲನೆ

ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಸುಮಾರು 1.6 ಕಿ.ಮೀ ದೂರ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಜುಲೈ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೇ, ಹೆಣ್ಣೂರು ಮುಖ್ಯರಸ್ತೆ ಬಳಿ ಹೆಬ್ಬಾಳ ಕಣಿವೆಯಲ್ಲಿ ಹೂಳೆತ್ತುವ ಕಾರ್ಯ ಮತ್ತು ಪಾಲಿಕೆಯ ಒಣತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ ಮಾಡಿದರು.  

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಪರಿಶೀಲನೆ

ಎಚ್‌ಬಿಆರ್‌ ಲೇಔಟ್‌ನಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆ ಸಾಮರ್ಥ್ಯದ, 17 ಕೋಟಿ ರೂಪಾಯಿ ವೆಚ್ಚದ ಆಸ್ಪತ್ರೆಯನ್ನು ಪರಿಶೀಲನೆ ಮಾಡಿದ ಆಯುಕ್ತ ತುಷಾರ್‌ ಅವರು, ಮುಂದಿನ 6 ತಿಂಗಳಲ್ಲಿ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ, ಪುಲಕೇಶಿ ನಗರ ಕೋಮಲ ಜಂಕ್ಷನ್ ಬಳಿ ಬಡವರ್ಗದ ಜನರಿಗಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪ ಕಾಮಗಾರಿ ಪರಿಶೀಲನೆ ನಡೆಸಿ, ಇನ್ನು 12 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು. ಕೋಮಲ ಜಂಕ್ಷನ್ ರಸ್ತೆ ಬದಿ ಆಟೋ ಟಿಪ್ಪರ್ ಗಳಿಂದ ಕಾಂಪ್ಯಾಕ್ಟರ್ ಕಸ ವರ್ಗಾಯಿಸುವುದರಿಂದ ಆ ಭಾಗದಲ್ಲಿ ಹೋಗುವ ಸಾರ್ವಜನಿಕರಿಗೆ ಕಿರಿ-ಕಿರಿಯುಂಟಾಗುತ್ತದೆ. ಈ ಸಂಬಂಧ ಕಸ ವರ್ಗಾಯಿಸುವುದು ಸಾರ್ವಜನಿಕರಿಗೆ ಕಾಣಿಸದಂತೆ ತಾತ್ಕಾಲಿಕವಾಗಿ ಶೀಟ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮುಖ್ಯ ಆಯುಕ್ತರೊಂದಿಗೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ಮುಖ್ಯ ಇಂಜಿನಿಯರ್‌ಗಳಾದ ಮೋಹನ್ ಕೃಷ್ಣಾ, ಸುಗುಣಾ, ಪ್ರಹ್ಲಾದ್, ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್, ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಅಪಾಯಕಾರಿ ಕಟ್ಟಡಗಳ ಮಾಹಿತಿ ಕೊಡಿ: ಬಿಬಿಎಂಪಿ ನೂತನ ಆಯುಕ್ತ ಗಿರಿನಾಥ್

Exit mobile version