ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಅಗ್ನಿ ಅನಾಹುತದಲ್ಲಿ (BBMP Fire Accident) ತೀವ್ರ ಗಾಯಗೊಂಡಿರುವ ಬಿಬಿಎಂಪಿ ಚೀಫ್ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ನಗರದ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಶಿವಕುಮಾರ್ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.
ಇದೇ ವೇಳೆ ಮಾತನಾಡಿದ ಅವರು ಅಗ್ನಿ ಅನಾಹುತದಿಂದ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ಅವರ ಆರೋಗ್ಯ ಸುಧಾರಿಸುತ್ತಿರುವಂತೆ ಕಂಡಿತ್ತು. ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಕೂಡ 2-3 ಬಾರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಇಲ್ಲಿನ ವೈದ್ಯರು ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಅವರ ಆರೋಗ್ಯ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊರ್ವ ಸಿಬ್ಬಂದಿ ಜ್ಯೋತಿ ಆರೋಗ್ಯ ಚೇತರಿಕೆ ಕಾಣುತ್ತಿದ್ದು, ಸುಟ್ಟ ಗಾಯಗಳಿವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ
ಅಗ್ನಿ ಅನಾಹುತದ ಬಗ್ಗೆ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ವರದಿಗಳು ಬರಲಿ. ಪೊಲೀಸ್, ಬಿಬಿಎಂಪಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಅದು ಪೂರ್ಣಗೊಳ್ಳಲಿ, ಆಮೇಲೆ ಮಾತನಾಡುತ್ತೇನೆ’ ಎಂದು ತಿಳಿಸಿದರು.
ಇದನ್ನೂ ಓದಿ: Attack on farmer : ನಿರಾಣಿ ವಿರುದ್ಧ ಭಿಕ್ಷಾಟನಾ ಅಭಿಯಾನ; ರೈತ ಮುಖಂಡನ ಮೇಲೆ ದುಷ್ಕರ್ಮಿಗಳು ಅಟ್ಯಾಕ್!
ಏನಿದು ಅಗ್ನಿ ದುರುಂತ?
ಕಳೆದ ಆಗಸ್ಟ್ 11ರ ಸಂಜೆ 4.30ರ ಹೊತ್ತಿಗೆ ಬಿಬಿಎಂಪಿ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ (BBMP Quality Control lab) ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ (BBMP Fire accident) ಒಂಬತ್ತು ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗೆ ಗಂಭೀರ ಗಾಯಗೊಂಡಿದ್ದರು. ಕೂಡಲೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಟ್ರಾಮಾ ಸೆಂಟರ್‌ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಎಲ್ಲಾ 9 ಗಾಯಾಳುಗಳಿಗೆ ಟ್ರಾಮಾ ಸೆಂಟರ್‌ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 9 ಜನರಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಚೀಫ್ ಇಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಕಿರಣ್ ಅವರ ಸ್ಥಿತಿ ಸುಧಾರಿಸಿದೆಯಾದರೂ ಗಂಭೀರವಾಗಿಯೇ ಇದೆ.
ಚೀಫ್ ಇಂಜಿನಿಯರ್ ಶಿವಕುಮಾರ್‌ಗೆ 25% ಸುಟ್ಟಗಾಯವಾಗಿದ್ದು, ಗಂಟಲಿನ ಸಮಸ್ಯೆಯಿಂದಾಗಿ ಮಾತನಾಡಲು ಕಷ್ಟವಾಗುತ್ತಿದೆ. ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಡಯಾಲಿಸಿಸ್ ಮಾಡಲಾಗುತ್ತಿದೆ. ಕಿರಣ್ ದೇಹದ ಕಿಡ್ನಿ ಮೇಲೆ ಯಾವುದೇ ತೊಂದರೆ ಆಗದಂತೆ ನೆಫ್ರಾಲಜಿ ತಜ್ಞರು ನಿಗಾ ಇಟ್ಟಿದ್ದಾರೆ. ಆಪರೇಟರ್ ಜ್ಯೋತಿ ಅವರ ಪರಿಸ್ಥಿತಿಯೂ ಕ್ರಿಟಿಕಲ್ ಆಗಿದ್ದು, ಅವರ ಮುಖಕ್ಕೆ ಹಾನಿಯಾಗಿದ್ದು, ಉಸಿರಾಟದ ಸಮಸ್ಯೆ ಇದೆ.
ಗಾಯಾಳುಗಳ ನರಳಾಟ
- ಶಿವಕುಮಾರ್: ಮುಖ್ಯ ಅಭಿಯಂತರರು, 40 ವರ್ಷ, 25% ಬರ್ನಿಂಗ್ ಆಗಿದೆ, ಗಂಟಲಿನಲ್ಲಿ ಸಮಸ್ಯೆ ಇದೆ. ಸದ್ಯದ ಆರೋಗ್ಯ ಸ್ಥಿತಿ ಚಿಂತಾಜನಕ
- ಕಿರಣ್: ಕಾರ್ಯಪಾಲಕ ಅಭಿಯಂತರರು, 35 ವರ್ಷ, 12% ಬರ್ನಿಂಗ್ ಆಗಿದೆ, ಡಯಾಲಿಸಿಸ್ ಮಾಡಲಾಗ್ತಿದೆ. ಸದ್ಯದ ಸ್ಥಿತಿ ಗಂಭೀರ
- ಜ್ಯೋತಿ: ಆಪರೇಟರ್, 21 ವರ್ಷ, 28% ಬರ್ನಿಂಗ್ ಆಗಿದೆ. ಮುಖಕ್ಕೆ ಹಾನಿ, ಉಸಿರಾಟದ ಸಮಸ್ಯೆ ಇದೆ. ಸದ್ಯದ ಆರೋಗ್ಯ ಸ್ಥಿತಿ ಗಂಭೀರ
- ಮನೋಜ್: ಗಣಕಯಂತ್ರ ನಿರ್ವಾಹಕರು, 32 ವರ್ಷ, 17% ಬರ್ನಿಂಗ್ ಆಗಿದೆ, ಸದ್ಯ ನಾರ್ಮಲ್ ಆಗಿದ್ದಾರೆ
- ಶ್ರೀನಿವಾಸ್: ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, 37 ವರ್ಷ, 27% ಸುಟ್ಟ ಗಾಯಗಳಾಗಿವೆ. ಸದ್ಯದ ಸ್ಥಿತಿ ನಾರ್ಮಲ್
- ಸೀರಾಜ್: ಪ್ರಥಮ ದರ್ಜೆ ಸಹಾಯಕರು, 29 ವರ್ಷ, 28% ಸುಟ್ಟ ಗಾಯಗಳಾಗಿವೆ. ಸದ್ಯದ ಸ್ಥಿತಿ ನಾರ್ಮಲ್
- ಶ್ರೀಧರ್: ಕಾರ್ಯಪಾಲಕ ಅಭಿಯಂತರರು, 38 ವರ್ಷ,18 % ಬರ್ನಿಂಗ್. ಸದ್ಯದ ಸ್ಥಿತಿ ನಾರ್ಮಲ್
- ಸಂತೋಷ್ ಕುಮಾರ್: ಕಾರ್ಯಪಾಲಕ ಅಭಿಯಂತರರು, 47 ವರ್ಷ, 11 ಪರ್ಸೆಂಟ್ ಬರ್ನಿಂಗ್ ಆಗಿದೆ. ಸದ್ಯದ ಸ್ಥಿತಿ ನಾರ್ಮಲ್
- ವಿಜಯಮಾಲ: ಕಾರ್ಯಪಾಲಕ ಅಭಿಯಂತರರು, 27 ವರ್ಷ, 25 % ಬರ್ನಿಂಗ್. ಸದ್ಯದ ಸ್ಥಿತಿ ನಾರ್ಮಲ್
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ