ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಅವಧಿಯಲ್ಲಿ ವಾರಿಯರ್ಸ್ ಜತೆಗೂಡಿ ಬಿಬಿಎಂಪಿಯ ಮಾರ್ಷಲ್‌ಗಳು (BBMP Marshals) ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಬಿಬಿಎಂಪಿ ಹಿರಿಯ ಅಧಿಕಾರಿಗಳು ತಮ್ಮ ಸ್ವಂತ ಕೆಲಸಕ್ಕೆ ಮಾರ್ಷಲ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆಲ ಹಿರಿಯ ಅಧಿಕಾರಿಗಳು ಮಾರ್ಷಲ್‌ಗಳನ್ನು ತಮ್ಮ ಭದ್ರತಾ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದಾರೆ. ಊಟದ ಡಬ್ಬಿ ತಂದುಕೊಡುವುದು ಮತ್ತು ಕಚೇರಿ ಫೈಲ್ಗಳನ್ನು ತಂದುಕೊಡಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಇವರನ್ನು ಬಿಬಿಎಂಪಿ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ.
3 ಕೋಟಿ ರೂಪಾಯಿ ವಾರ್ಷಿಕ ವೇತನದೊಂದಿಗೆ 240 ಮಾರ್ಷಲ್‌ಗಳನ್ನು ಒದಗಿಸುವಂತೆ ಮಾಜಿ ಸೈನಿಕರ ಕಲ್ಯಾಣ ಸೊಸೈಟಿಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 2019ರಲ್ಲಿ ಪ್ರಸ್ತಾವನೆ ಜಾರಿಗೆ ತರಲಾಯಿತು. ಬಿಬಿಎಂಪಿ 2019ರಲ್ಲಿ ಈ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಸದ್ಯ ಬಿಬಿಎಂಪಿಯಲ್ಲಿ 500 ಮಂದಿ ಮಾರ್ಷ್ಲ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ಲಾಸ್ಟಿಕ್ ಬ್ಯಾನ್ ಹಾಗೂ ಮಾಸ್ಕ್ ಹಾಕುವುದು, ರಸ್ತೆಯಲ್ಲಿ ಕಸ ಹಾಕುವವರ ಮೇಲೆ ನಿಗಾ ಇಡುವ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Theft case: ಕೋಟದಲ್ಲಿ ಸ್ಕೂಟಿ ಕದ್ದು ಸುಳ್ಯದ ಬಾತ್‌ರೂಮಲ್ಲಿ ನಿದ್ದೆಮಾಡಿ ಪೊಲೀಸರಿಗೆ ಸಿಕ್ಕಾಕಿಕೊಂಡ ಸುಲ್ತಾನ..!
ಇನ್ನು ಈ ರೀತಿಯ ಮಾರ್ಷಲ್‌ಗಳ ದುರ್ಬಳಕೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಪ್ರಶ್ನಿಸಿದ್ದರೆ, ಮಾರ್ಷಲ್‌ಗಳನ್ನು ಕಾಲಕಾಲಕ್ಕೆ ತಕ್ಕಂತೆ ವಿವಿಧ ಕೆಲಸಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಅವರ ಸಂಖ್ಯೆ ನಮ್ಮಲ್ಲಿ ಹೆಚ್ಚು ಆಗಿದ್ದು, ಒಂದು ತಿಂಗಳ ಹಿಂದೆಯೇ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಕಳಿಸಲಾಗಿದೆ ಎಂದರು. ಮಾರ್ಷಲ್‌ಗಳನ್ನು ಹಿರಿಯ ಅಧಿಕಾರಿಗಳು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರ ನೀಡದೇ ಹೊರಟುಹೋದರು.