ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದ್ದು, ಸಮರ್ಪಕ ದಾಖಲೆಗಳನ್ನು ವಕ್ಫ್ ಬೋರ್ಡ್ ಸಲ್ಲಿಸದ ಹಿನ್ನೆಲೆಯಲ್ಲಿ ಮೈದಾನ ಬಿಬಿಎಂಪಿಯದ್ದೇ (BBMP Property) ಎಂದು ಬಹುತೇಕ ಸಾಬೀತಾಗಿದೆ.
ಆಗಸ್ಟ್ 3ರ ಒಳಗಾಗಿ ವಕ್ಫ್ ಬೋರ್ಡ್ ಅಥವಾ ಇತರರಿಗೆ ಯಾವುದೇ ದಾಖಲೆಗಳಿದ್ದರೂ ನೀಡಬೇಕು ಎಂದು ಬಿಬಿಎಂಪಿ ಗಡುವು ನೀಡಿತ್ತು. ಆದರೆ, ಬಿಬಿಎಂಪಿ ಕೊಟ್ಟಿದ್ದ ಡೈಡ್‌ಲೈನ್ ಮುಕ್ತಾಯವಾಗಿದ್ದು, ಯಾವುದೇ ಮಹತ್ವದ ದಾಖಲೆಗಳು ಸಲ್ಲಿಕೆಯಾಗಿಲ್ಲ.
ಇದನ್ನೂ ಓದಿ | ಸಿಲಿಕಾನ್ ಸಿಟಿಯ ವಿವಿಧೆಡೆ ಭಾರಿ ಮಳೆ ; ಹಲವು ಬಡಾವಣೆಗಳು ಜಲಾವೃತ
ವಕ್ಫ್ ಬೋರ್ಡ್ ಈವರೆಗೆ ಸುಪ್ರೀಂ ಕೋರ್ಟ್ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ. ಇದರ ಹೊರತಾಗಿ ಹೆಚ್ಚುವರಿ ದಾಖಲೆ ಸಲ್ಲಿಕೆಯಾಗಿಲ್ಲ. ಇದೇ ವಿಚಾರ ಮುಂದಿಟ್ಟುಕೊಂಡು ಮೈದಾನ ಆಸ್ತಿ ಪಾಲಿಕೆಯದ್ದು ಎಂದು ಘೋಷಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಧ್ವಜಾರೋಹಣಕ್ಕೆ ಅವಕಾಶ ಕೋರಿ ಮನವಿ
ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆಯಿಂದ ಈದ್ಗಾ ಮೈದಾನದಲ್ಲಿ ಆ.15 ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಲು ಅವಕಾಶ ಕೋರಿ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೂ ಮುನ್ನ ಆಗಸ್ಟ್ 7ರಂದು ವಿವಾದಿತ ಮೈದಾನದಲ್ಲಿ ವೇದಿಕೆಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
“ಆ.7 ರಂದು ʻರಕ್ತ ಕೊಟ್ಟೇವು, ಮೈದಾನ ಬಿಟ್ಟು ಕೊಡೆವು’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಧಿಕೃತವಾಗಿ ಮೈದಾನದ ಪಾಲಿಕೆಯದ್ದು ಎಂದು ಘೋಷಣೆಯಾಗುವವರೆಗೆ ಹೋರಾಟ ನಿಲ್ಲುವುದಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಮೈದಾನ ಪಾಲಿಕೆಯದ್ದು ಎಂದು ಘೋಷಿಸಿದರೆ ಹೋರಾಟ ವಾಪಸ್ ಪಡೆಯುತ್ತೇವೆ. ಅದುವರೆಗೂ ಯಾವುದೇ ಕಾರಣಕ್ಕೆ ನಾವು ಹೋರಾಟವನ್ನು ಬಿಡುವುದಿಲ್ಲ” ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ತಿಳಿಸಿದ್ದಾರೆ.
ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆಗೆ ಬೆಂಗಳೂರು ಲಿಂಕ್, ಇಬ್ಬರು ಪೊಲೀಸ್ ವಶಕ್ಕೆ