ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬಿಬಿಎಂಪಿಯು ನೂರಾರು ಶಾಲೆಗಳನ್ನು ನಡೆಸುತ್ತಿದೆ. ಪಾಲಿಕೆಯ ಅನುದಾನದಿಂದ, ಸಂಘಸಂಸ್ಥೆಗಳ ದೇಣಿಗೆಯಿಂದ ಸ್ಮಾರ್ಟ್ ಬೋರ್ಡ್, ಪ್ರೊಜೆಕ್ಟರ್, ಸೌಂಡ್ ಸಿಸ್ಟಂ, ಆನ್‌ಲೈನ್ ಲ್ಯಾಬ್ ಸೇರಿದಂತೆ ಅನೇಕ ಹೊಸ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ಯಾವುದು ಉಪಯೋಗಕ್ಕೆ ಬರುತ್ತಿಲ್ಲ. ಯಾಕೆಂದರೆ ಶಾಲೆಗಳಲ್ಲಿ ಪ್ರಮುಖವಾಗಿ ಇರಬೇಕಾದ ಶಿಕ್ಷಕರೇ ಇನ್ನೂ ನೇಮಕವಾಗಿಲ್ಲ. ಬಿಬಿಎಂಪಿ ಶಾಲೆಗಳು ಆರಂಭವಾಗಿ ಒಂದು ತಿಂಗಳೇ ಕಳೆದರೂ ಶಿಕ್ಷಕರ (Bbmp Teachers) ನೇಮಕಾತಿ ಆಗಿಲ್ಲ.
ಬಿಬಿಎಂಪಿ ಶಾಲೆಗಳು ಆರಂಭವಾಗುವ ಮೊದಲೇ ಪಾಲಿಕೆ ಶಿಕ್ಷಕರ ನೇಮಕಾತಿಗೆ 2 ಬಾರಿ ಟೆಂಡರ್ ಕರೆದಿತ್ತು. ಆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲಿಕೆ ಹಾಕಿದ್ದ ಷರತ್ತುಗಳನ್ನು ಪೂರೈಸಲಾಗದೇ ಯಾವ ಸಂಸ್ಥೆಯೂ ಪಾಲ್ಗೊಂಡಿರಲಿಲ್ಲ. ಶಾಲೆಗಳು ಜೂನ್ ತಿಂಗಳಲ್ಲಿ ಆರಂಭವಾಗುತ್ತದೆ, ಶಿಕ್ಷಕರಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿದಿದ್ದರೂ, ಶಿಕ್ಷಕರ ನೇಮಕಾತಿಗೆ ಮತ್ತೊಂದು ಟೆಂಡರ್ ಪ್ರಕ್ರಿಯೆ ನಡಸುವ ಮನಸ್ಸು ಮಾಡಿಲ್ಲ.
ಶಾಲೆಗಳನ್ನು ಮುಚ್ಚಿಸಲು ಬಿಬಿಎಂಪಿ ಅಧಿಕಾರಿಗಳಿಂದಲೇ ಒಳಸಂಚು !?
ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಭಾಗವಹಿಸಲಿಲ್ಲ ಎಂದಾದರೆ ಬಿಬಿಎಂಪಿ, ಸರ್ಕಾರಕ್ಕೋ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಶಿಕ್ಷಕರನ್ನು ಒದಗಿಸುವಂತೆ ಮನವಿ ಮಾಡಬಹುದಿತ್ತು. ಕೊನೆ ಪಕ್ಷ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರನ್ನೇ ಕೆಲ ಗಂಟೆಗಳ ಆಧಾರದಲ್ಲಿ ಪ್ರತಿನಿತ್ಯ ಪಾಠ ಮಾಡುವಂತೆ ಕಳುಹಿಸಲು ಕೋರಿ ಸರ್ಕಾರಕ್ಕೆ ಮನವಿ ಮಾಡಬಹುದಿತ್ತು. ಇಷ್ಟೆಲ್ಲಾ ಆಯ್ಕೆಗಳು ಪಾಲಿಕೆ ಮುಂದೆ ಇದ್ದರೂ, ಪಾಲಿಕೆ ಮಾತ್ರ ಕ್ಯಾರೇ ಎಂದಿಲ್ಲ. ಪಾಲಿಕೆಯೇ ತನ್ನ ಶಾಲೆಗಳಿಗೆ ಶಿಕ್ಷಕರು ಬಾರದಂತೆ ಮಾಡುತ್ತಿದೆ. ಶಿಕ್ಷಕರು ಇಲ್ಲ ಎಂದರೆ ವಿದ್ಯಾರ್ಥಿಗಳೂ ಬರುದಿಲ್ಲ. ಆಗ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ ಎಂದು ಮುಚ್ಚಿಸಿ, ಖಾಸಗಿ ಶಾಲೆಗಳಿಗೆ ಅನುಕೂಲ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅಮರೇಶ್ ಆರೋಪ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಗಳ ವಿವರ
91 ಶಿಶುವಿಹಾರ ಶಾಲೆಗಳು
16 ಪ್ರಾಥಮಿಕ ಶಾಲೆಗಳು
33 ಪ್ರೌಢಶಾಲೆಗಳು
ಇದನ್ನೂ ಓದಿ: KEA Recruitment 2023 : ವಿವಿಧ ಹುದ್ದೆಗಳಿಗೆ ನೇಮಕ; ಕೆಇಎಯಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಪಾಲಿಕೆ ನಡೆಸುತ್ತಿರುವ ಇಷ್ಟೂ ಶಾಲೆಗಳಲ್ಲಿ ಈಗ 908 ಶಿಕ್ಷಕರಿದ್ದಾರೆ. ಅವರ ಪೈಕಿ 728 ಗುತ್ತಿಗೆ ಆಧಾರದಲ್ಲಿ ಹಾಗು 180 ಶಿಕ್ಷಕರು ಖಾಯಂ ಸೇವೆ ಸಲ್ಲಿಸುತ್ತಿದ್ದಾರೆ. ಗುತ್ತಿಗೆ ಶಿಕ್ಷಕರ ಪೈಕಿ ಬಹುತೇಕ ಅನರ್ಹರೇ ಇದ್ದು, ಇವರಿಂದಲೇ ಶಿಕ್ಷಣದ ಗುಣಮಟ್ಟ ಇಳಿದಿದೆ ಎಂದು ಖುದ್ದು ಮುಖ್ಯ ಆಯುಕ್ತರೇ ಈ ಹಿಂದೆ ಒಪ್ಪಿಕೊಂಡಿದ್ದರು. ಆದರೆ ಬಿಬಿಎಂಪಿ ಶಾಲೆಗಳಿಗೆ ಬರುವುದು ಬಡವರ ಮಕ್ಕಳು, ಏನೇ ಆದರೂ ಯಾರು ಪ್ರಶ್ನೆ ಮಾಡಲು ಮುಂದೆ ಬರುವುದಿಲ್ಲ. ಯಾರಾದರೂ ಧ್ವನಿ ಎತ್ತಿದ್ದರೆ ಶಿಕ್ಷಕರಿಲ್ಲ ಎಂಬ ನೆಪವನ್ನು ಹೇಳಿ ಪೋಷಕರ ಬಾಯಿ ಮುಚ್ಚಿಸಬಹುದು ಎಂಬುದು ಪಾಲಿಕೆಯ ಪ್ಲ್ಯಾನ್ ಎಂದು ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ