Site icon Vistara News

BBMP ವಾರ್ಡ್‌ ಮರುವಿಂಗಡಣೆ, ಮೀಸಲಾತಿ ಬಗ್ಗೆ ಮೊದಲು ಹೈಕೋರ್ಟ್‌ ತೀರ್ಮಾನಿಸಲಿ ಎಂದ ಸುಪ್ರೀಂ

BBMP Office Bengaluru

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ವಿಚಾರದ ದಾವೆಯನ್ನು ಮೊದಲು ಕರ್ನಾಟಕ ಹೈಕೋರ್ಟ್‌ ತೀರ್ಮಾನ ಮಾಡಲಿ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಡಾ. ಬಿ ಆರ್‌ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿ ಹಾಗೂ ಭಾಸ್ಕರ್‌ ಎಂಬವರು ಪ್ರತ್ಯೇಕವಾಗಿ ಸಲ್ಲಿಸಿರುವ ವಿಶೇಷ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌ ಮತ್ತು ಜೆ ಕೆ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪಕ್ಷಕಾರರ ವಕೀಲರನ್ನು ಆಲಿಸಿದ ಬಳಿಕ ಕಾನೂನಿನ ಅನ್ವಯ ಅರ್ಜಿಯ ಅರ್ಹತೆ ಆಧರಿಸಿ ಹೈಕೋರ್ಟ್‌ ಮನವಿಗಳನ್ನು ಪರಿಗಣಿಸುವುದು ಸೂಕ್ತ ಎಂದು ನಮಗೆ ಅನ್ನಿಸುತ್ತದೆ” ಎಂದು ಪೀಠ ಹೇಳಿತು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಮಧ್ಯಂತರ ನಿರ್ದೇಶನ ಮತ್ತು ಆದೇಶ ಮಾಡಲು ಹೈಕೋರ್ಟ್‌ಗೆ ಸ್ವಾತಂತ್ರ್ಯ ಕಲ್ಪಿಸಬೇಕು” ಎಂದರು. ಇದಕ್ಕೆ ಪೀಠವು ಅದೇ ರೀತಿ ಆದೇಶದ ಕರಡು ಸರಿಪಡಿಸಲಾಗುವುದು ಎಂದಿತು.

ಹೈಕೋರ್ಟ್‌ ಮುಂದೆ ಪಕ್ಷಕಾರರಾಗಿರುವ ಅರ್ಜಿದಾರರೊಬ್ಬರು ಸಲ್ಲಿಸಿದ್ದ ಮಧ್ಯಪ್ರವೇಶಿಕೆ ಮನವಿಯ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ವಾದಿಸಿದರು. ವಾರ್ಡ್‌ ಪುನರ್‌ ವಿಂಗಡಣೆ ಪ್ರಕರಣವನ್ನು ಹೈಕೋರ್ಟ್‌ ನಿರ್ಧರಿಸಬಹುದೇ ಎಂಬುದು ಮನವಿಯಲ್ಲಿನ ಕೋರಿಕೆಯಾಗಿತ್ತು.

ಹಾಲಿ ವಾರ್ಡ್‌ ವಿಂಗಡಣೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಸಿಬಲ್‌ ಹೇಳಿದರು. ಪ್ರತಿ ವಾದಿಗಳೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು “ರಾಜ್ಯ ಚುನಾವಣಾ ಆಯೋಗವು ತಕ್ಷಣ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು. ವಾರ್ಡ್‌ ಪುನರ್‌ ವಿಂಗಡಣೆ ವಿಚಾರವು ಚುನಾವಣೆಗೆ ಅಡ್ಡಿಯಾಗಬಾರದು” ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸುರೇಶ್‌ ಮಹಾಜನ್‌ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ಪುನರ್‌ ವಿಂಗಡಣೆಗೆ ಮಧ್ಯಂತರ ತಡೆ ನೀಡುವ ಕುರಿತು ಸುಪ್ರೀಂ ಕೋರ್ಟ್‌ ಸ್ಪಷ್ಟನೆ ಕೋರುವುದು ಉತ್ತಮ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ನೇತೃತ್ವದ ಪೀಠ ಹೇಳಿತ್ತು. ಆದರೆ, ಈಗ ವಿಚಾರ ಮತ್ತೆ ಹೈಕೋರ್ಟ್‌ಗೇ ಬಂದಿದೆ.

Exit mobile version