Site icon Vistara News

ಸಮೀಕ್ಷೆ ವೇಳೆ ನನ್ನ ಜತೆ ಬರ್ಬೇಕು, ಆಗಲ್ಲ ಅಂದ್ರೆ ದನ ಕಾಯಲು‌ ಹೋಗಿ: ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ್ ತರಾಟೆ

CC Pateel

ಗದಗ: ʻʻಸಂತೆ ಹಿಂದೆ ದನ ಕಟ್ಟಿದಂತೆ ಅಧಿಕಾರಿಗಳು ಕೊನೆಯಲ್ಲಿ ಇರೋದಲ್ಲ. ಬೆಳೆ ಹಾನಿ ಸಮೀಕ್ಷೆ ವೇಳೆ ನನ್ನ ಜತೆ ಇರಲೇಬೇಕು. ನಿಮಗೆ ಆಗಲ್ಲ ಅಂದರೆ ದನ ಕಾಯಲು ಹೋಗಿ”- ಹೀಗೆಂದು ಕೃಷಿ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತರಾಟೆ ತೆಗೆದುಕೊಂಡರು.

ಗದಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾನಿಯ ಸಮೀಕ್ಷೆಗೆ ಹೊಂಬಳ ಗ್ರಾಮಕ್ಕೆ ಶುಕ್ರವಾರ ತೆರಳಿದ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಸಚಿವರ ಜತೆ ಇರದೇ ಕಾರಿನ ಬಳಿ ಇದ್ದದ್ದನ್ನು ಕಂಡು ಸಚಿವರು ಕೆಂಡಾಮಂಡಲರಾದರು. ಸಚಿವರು ಸಿಟ್ಟಾಗುತ್ತಿದ್ದಂತೆ ಓಡೋಡಿ ಬಂದ ಕೃಷಿ ಜಂಟಿ ನಿರ್ದೇಶಕ ಕೆ. ಜಿಯಾವುಲ್ಲ ಅವರಿಗೆ ʻʻಎಸಿ ರೂಂ ನಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡುವುದಲ್ಲ. ಸೂಕ್ತರೀತಿಯಲ್ಲಿ ಸಮೀಕ್ಷೆ ನಡೆಯಬೇಕು ಮತ್ತು ಜನರ ನೋವನ್ನು ತಾಳ್ಮೆಯಿಂದ ಕೇಳಬೇಕುʼʼ ಎಂದು ಎಚ್ಚರಿಸಿದರು.

ಸಂತ್ರಸ್ತರ ಅಹವಾಲು ಕೇಳುತ್ತಿರುವ ಸಚಿವ ಸಿ.ಸಿ. ಪಾಟೀಲ್

ಸಚಿವರ ಮುಂದೆ ರೈತ ಮಹಿಳೆ ಕಣ್ಣೀರು
“ಏನ್ ಮಾಡ್ಬೇಕು ಹೇಳ್ರಿ… ಹೊಲದ ಮಣ್ಣೆಲ್ಲ ಕೊಚ್ಚಿಕೊಂಡು ಹೋಗೈತ್ರಿ. ಮಣ್ಣು ಎಲ್ಲಿಂದ ತಂದು ಹಾಕಬೇಕ್ರಿ” ಎಂದು ರೈತ ಮಹಿಳೆ ಸುಮಿತ್ರಾ ಸಚಿವ ಸಿಸಿ ಪಾಟೀಲ ಎದುರು ಗಳಗಳನೇ ಕಣ್ಣೀರಿಟ್ಟರು. ಎಂಟು ಎಕರೆ ಹೊಂದಿರುವ ಸುಮಿತ್ರಾ ಅವರ ಹೊಲ ಹಳ್ಳದ ಪಕ್ಕದಲ್ಲೇ ಇದೆ. ಮಳೆಯಿಂದ ಹಳ್ಳ ಕೋಡಿ ಬಿದ್ದು ಸಂಪೂರ್ಣ ಹೊಲದ ಮಣ್ಣು ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ರೈತ ಮಹಿಳೆ ಸುಮಿತ್ರಾ ಸಚಿವರ ಬಳಿ ನೋವು ತೋಡಿಕೊಂಡಳು. ಮಹಿಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅಕ್ರಮ ಕಟ್ಟಡ ತೆರವಿಗೆ ಗ್ರಾಮಸ್ಥರ ಆಗ್ರಹ
ಗ್ರಾಮದ ನೀರು ಹರಿದು ಹಳ್ಳಕ್ಕೆ ಸೇರುವ ಮಾರ್ಗದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರಿಂದ ನೀರು ಮನೆಗಳಿಗೆ ನುಗ್ಗುತ್ತಿದೆ. ಅಕ್ರಮ ಕಟ್ಟಡ ವನ್ನು ತೆರವುಗೊಳಿಸಬೇಕು ಎಂದು ಹೊಂಬಳ ಗ್ರಾಮಸ್ಥರಿಂದ ಸಚಿವ ಸಿ.ಸಿ.ಪಾಟೀಲರಿಗೆ ಆಗ್ರಹಿಸಲಾಯಿತು.

ಅಧ್ಯಕ್ಷಾವಧಿಯಲ್ಲಿ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಿಸಿದ್ದಾನೆ. ಹೀಗಾಗಿ ಗ್ರಾಮದಲ್ಲಿ ಬಿದ್ದ ನೀರು ಹಳ್ಳಕ್ಕೆ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದರು. ಸ್ಥಳದಲ್ಲೇ ಪಿಡಿಒ ಅವರನ್ನು ಕರೆಸಿದ ಸಚಿವರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜನರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಇದನ್ನೂ ಓದಿ | Rain News | ಮಳೆ ಹಾನಿ ಪರಿಶೀಲನೆಗೆ ಹೋದ ಅಧಿಕಾರಿಗಳು ಪ್ರವಾಹಕ್ಕೆ ಸಿಲುಕಿ ಕಾರಿನ ಮೇಲೆ ನಿಂತರು!

Exit mobile version