ರಾಮನಗರ/ತುಮಕೂರು: ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಭೀತಿಯಲ್ಲಿ ಇರುವಂತಾಗಿದೆ. ಆಹಾರ ಅರಸಿ ಕಾಡಿನಿಂದ ಮನೆ ಬಾಗಿಲಿಗೆ ಬರುತ್ತಿದೆ. ರಾಮನಗರದ ವಿಭೂತಿಕೆರೆ ಗ್ರಾಮದಲ್ಲಿ ಮಹಿಳೆಯ ಮೇಲೆ ಕರಡಿಯೊಂದು ದಾಳಿ (Bear attack) ಮಾಡಿದೆ. ವಿಭೂತಿಕೆರೆ ಗ್ರಾಮದ ವೀರಮ್ಮ (55) ಕರಡಿ ದಾಳಿಗೊಳಗಾದವರು.
ಗ್ರಾಮದ ಉದ್ಭವ ನಾಗಪ್ಪ ದೇವಸ್ಥಾನದ ಬಳಿ ವೀರಮ್ಮ ಬೆಳಗ್ಗೆ 6 ಗಂಟೆ ಸುಮಾರಿಗೆ ವಾಕಿಂಗ್ ಮಾಡಲೆಂದು ಹೋಗಿದ್ದಾರೆ. ಈ ವೇಳೆ ಎಲ್ಲಿಂದಲೋ ಬಂದ ಕರಡಿ ಏಕಾಏಕಿ ದಾಳಿ ನಡೆಸಿದೆ. ಕರಡಿಯಿಂದ ತಪ್ಪಿಸಿಕೊಂಡ ವೀರಮ್ಮಗೆ ಗಂಭೀರ ಗಾಯಗಳಾಗಿದೆ. ಕರಡಿ ದಾಳಿ ಮಾಡುವಾಗ ವೀರಮ್ಮ ಕಿರುಚಾಡಿದ್ದು ಕರಡಿ ಬೆದರಿ ಓಡಿಹೋಗಿದೆ.
ಕರಡಿ ದಾಳಿಯಿಂದ ಮೈಕೈ ಹಾಗೂ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳು ವೀರಮ್ಮರನ್ನು ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಸೆರೆಯಿಡಿಯುವ ಭರವಸೆ ನೀಡಿದ್ದಾರೆ.
ಚಿರತೆ ಭಯದ ನಡುವೆ ಕತ್ತೆಕಿರುಬ ಪ್ರತ್ಯಕ್ಷ
ಗದಗದ ಅಸುಂಡಿ ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಚಿರತೆ ದಾಳಿಯಿಂದ ಕಂಗಾಲಾಗಿದ್ದವರಿಗೆ, ಈಗ ಕತ್ತೆಕಿರುಬ ಪ್ರತ್ಯಕ್ಷವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕಪ್ಪತಗುಡ್ಡಕ್ಕೆ ಹೊಂದಿಕೊಂಡಿರುವ ಅಸುಂಡಿ ಗ್ರಾಮದ ರೈತರ ಜಮೀನಿನಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದೆ.
ಇದನ್ನೂ ಓದಿ: Suicide Case: ಬಲೂನ್ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂರ್ತೆದಾರರ ಮುಖಂಡ
ಕೆಲ ದಿನಗಳ ಹಿಂದೆ ಸುಭಾಷ್ ರೆಡ್ಡಿ ಎಂಬುವವರಿಗೆ ಸೇರಿದ ಎರಡು ಕರುಗಳ ಮೇಲೆ ಕಾಡುಪ್ರಾಣಿಗಳು ದಾಳಿ ಮಾಡಿತ್ತು. ಜಾನುವಾರುಗಳ ಮೇಲೆ ದಾಳಿ ಮಾಡಿರುವುದು ಕತ್ತೆಕಿರುಬನಾ ಅಥವಾ ಚಿರತೆಯಾ ಎಂಬ ಅನುಮಾನ ಮೂಡಿದೆ. ಕಳೆದ ತಿಂಗಳು ಹೈವೇನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು, ಈಗ ಜಮೀನಿನಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದೆ. ಹೀಗಾಗಿ ಕಾಡುಪ್ರಾಣಿಗಳಿಂದ ಜಾನುವಾರಗಳನ್ನು ರಕ್ಷಿಸಿ ಎಂದು ರೈತರು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ