Site icon Vistara News

ಬೇಡ, ಜಂಗಮ ಪ್ರತಿಭಟನೆ: ಹೆದ್ದಾರಿಯಲ್ಲಿ ಹಾಹಾಕಾರ

ಬೇಡ, ಜಂಗಮ ಪ್ರತಿಭಟನೆ:

ತುಮಕೂರು/ಚಿತ್ರದುರ್ಗ: ಬೇಡ ಜಂಗಮ ಮೀಸಲು ಹೋರಾಟ ಸಮಾವೇಶಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲೇ ದಿಢೀರ್ ಧರಣಿ ನಡೆಸಿದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಬುಧವಾರ (29 ಜೂನ್‌) ಸಂಜೆಯಿಂದಲೇ ನಾನಾ ಜಿಲ್ಲೆಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ ಕಡೆಗೆ ಹೊರಟಿದ್ದ ಪ್ರತಿಭಟನಾಕಾರರು, ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಹೆದ್ದಾರಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಶಿರಾ-ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು.

ಬೆಂಗಳೂರಿಗೆ ಹೊರಟಿದ್ದ ಹೋರಾಟಗಾರರನ್ನು ಪೊಲೀಸರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್ ಬಳಿ ತಡೆದರು. ಪೊಲೀಸರು ತಡೆ ಹಾಕಿದ ಕಾರಣ ಪ್ರತಿಭಟನಾಕಾರರ ಬಸ್, ಕ್ರೂಸರ್ ಇತ್ಯಾದಿ ವಾಹನಗಳು ಎಲ್ಲೆಂದರಲ್ಲಿ ನಿಂತವು. ಬೆಂಗಳೂರಿಗೆ ಹೋಗುವುದನ್ನು ತಡೆಯುವಂತೆ ಪೊಲೀಸರಿಗೆ ಸೂಚನೆ ಲಭಿಸಿತ್ತು ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ಧಾರಾವಾಡ, ವಿಜಯಪುರ ಹೀಗೆ ನಾನಾ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದರು.

ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು

ಪ್ರತಿಭಟನಾಕಾರರು ರಸ್ತೆಗಿಳಿದ ಪರಿಣಾಮ ರಾಷ್ಟೀಯ ಹೆದ್ದಾರಿ 48ರಲ್ಲಿ ಬೆಳಗಿನ ಜಾವ 4 ಗಂಟೆಗೇ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು 20 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. 5 ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ತಬ್ಧವಾಗಿತ್ತು.

ತುರ್ತಾಗಿ ಊರಿಗೆ ಹೋಗಬೇಕಾದವರು ಮತ್ತು ಉದ್ಯೋಗ, ಸಂದರ್ಶನ, ಕಾಲೇಜು ಪ್ರವೇಶ ಇತ್ಯಾದಿ ಕಾರಣಗಳಿಗಾಗಿ ಬೆಂಗಳೂರಿಗೆ ಹೊರಟಿದ್ದವರು ಅತಂತ್ರ ಸ್ಥಿತಿಯಲ್ಲಿ ಸಿಲುಕಬೇಕಾಯಿತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ವಾಹನ ಸಂಚಾರ ಸುಗಮಗೊಳಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ, ಮೈಸೂರು, ಹಾವೇರಿ ಕಡೆಯಿಂದ ಬರುತ್ತಿದ್ದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

ಇದನ್ನೂ ಓದಿ | ಪಠ್ಯಪುಸ್ತಕ ವಿವಾದ: ಲಿಂಗಾಯತ, ಒಕ್ಕಲಿಗ ಆಯಿತು, ಈಗ ಕುರುಬ ಸಮುದಾಯದಿಂದಲೂ ಆಕ್ಷೇಪ

ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಕ್ಕೆ ಆಕ್ರೋಶ

ಪೊಲೀಸರು ತಮ್ಮನ್ನು ತಡೆದು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಪಾದಿಸಿ ರಸ್ತೆಯಲ್ಲೇ ಧರಣಿ ಕುಳಿತರು. ಆ ಬಳಿಕ ಪೊಲೀಸರು ಅಲ್ಲಿಂದ ತೆರವು ಮಾಡುತ್ತಿದ್ದಂತೆ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದರು. ಕೊನೇ ಕ್ಷಣದಲ್ಲಿ ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವುದು ಸರಿಯಲ್ಲ ಎಂದು ಬೇಡ ಜಂಗಮ ಹೋರಾಟ ಸಮಿತಿಯ ಮುಖಂಡರು ಆಪಾದಿಸಿದರು.

ತುಮಕೂರಿನ ಶಿರಾ ಟೋಲ್ ಗೇಟ್ ಬಳಿ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ತುಮಕೂರು ಎಸ್. ಪಿ. ರಾಹುಲ್ ಕುಮಾರ್ ಶಹಾಪುರವಾಡ್ ಮಾತನಾಡಿ, ಬೆಳಗ್ಗೆ ಸುಮಾರು ಎರಡೂವರೆ ಘಂಟೆಯಿಂದ ಟ್ರಾಫಿಕ್ ಜಾಮ್ ಆಗಿತ್ತು. ಬೆಂಗಳೂರಿಗೆ ಹೋಗುವಂಥವರನ್ನು ತಡೆಯುವ ವ್ಯವಸ್ಥೆ ಮಾಡಿದ್ದೆವು. ಅವರನ್ನು ಮನವೊಲಿಸಿ ಇದೀಗ ಟ್ರಾಫಿಕ್‌ ಕ್ಲೀಯರ್‌ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು

Exit mobile version