Site icon Vistara News

ಈಡೇರದ ಸರ್ಕಾರದ ಭರವಸೆ; 5ನೇ ದಿನಕ್ಕೆ ಕಾಲಿಟ್ಟ ಬೇಡ ಜಂಗಮರ ಪ್ರತಿಭಟನೆ

ಬೇಡ ಜಂಗಮ

ಬೆಂಗಳೂರು: ಸರ್ಕಾರ ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳ ಹಾಗೂ ಜಾತಿ ಪ್ರಮಾಣ ಪತ್ರಕ್ಕಾಗಿ ಒತ್ತಾಯಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ೫ನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ ಐದು ದಿನಗಳಿಂದ ನಿರಂತರವಾಗಿ ಸಮುದಾಯದ ಪ್ರತಿಭಟನಾಕಾರರು ಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಗುರುವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು, ಶುಕ್ರವಾರ ಸಂಜೆಯೊಳಗೆ ಜಾತಿ ಪ್ರಮಾಣಪತ್ರವನ್ನು ನೀಡುವುದಾಗಿ ಅಧಿಕೃತ ಆದೇಶ ನೀಡುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಈ ಬಗ್ಗೆ ಸರ್ಕಾರ ಯಾವುದೇ ಆದೇಶ ನೀಡದೆ ಇರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾತು ತಪ್ಪಿದ ಸರ್ಕಾರ ಎಂದೂ ಸಹ ಪ್ರತಿಭಟನಾನಿರತ ಬೇಡ ಜಂಗಮ ಸಮುದಾಯದವರು ಆಕ್ರೋಶವನ್ನು ಹೊರಹಾಕಿದ್ದಾರೆ.

ಸರ್ಕಾರದ ವಿರುದ್ಧ ಸಮುದಾಯದ ಆಕ್ರೋಶ

ಸೋಮವಾರ ಬೆಳಗ್ಗೆ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು. ಪ್ರತಿಭಟನೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸಮುದಾಯದ ಜನರು ಆಗಮಿಸುತ್ತಿದ್ದಾರೆ. ಸರ್ಕಾರದಿಂದ ಅಧಿಕೃತ ಆದೇಶ ಆಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಬೇಡ ಜಂಗಮ ಸಂಘಟನೆ ಅಧ್ಯಕ್ಷ ಬಿ.ಡಿ. ಹಿರೇಮಠ್ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು ಭಾಗಿಯಾಗಿದ್ದು, ಇನ್ನೂ ಹಲವು ಮಠಾಧೀಶರು ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಪೊಲೀಸರು ಪ್ರತಿಭಟನಾಕಾರರ ವಾಹನಗಳನ್ನು ತಡೆದ ಹಿನ್ನೆಲೆಯಲ್ಲಿ ಸೋಮವಾರ ಬಸ್, ಟ್ರೈನ್ ಮೂಲಕವೂ ಆಗಮಿಸಲು ಹಿರೇಮಠ್ ಕರೆ ನೀಡಿದ್ದಾರೆ.

ಇದನ್ನೂ ಓದಿ | ದತ್ತ ಪೀಠದ ಪೂಜಾ ಸ್ಥಳದಲ್ಲಿ ಮುಸ್ಲಿಮರಿಂದ ಅಪವಿತ್ರ ಆಗೋದು ಬೇಡ; ಪ್ರಮೋದ್ ಮುತಾಲಿಕ್‌ ಖಡಕ್‌ ನುಡಿ

Exit mobile version