Site icon Vistara News

ಸಿದ್ದರಾಮಯ್ಯ ಭಾಗವಹಿಸಿದ್ದ ಕಾಂಗ್ರೆಸ್‌ ಸಮಾವೇಶಕ್ಕೆ ತೆರಳಿದ್ದ ಪರೇಶ್ ಮೇಸ್ತಾ, ಆ ದಿನವೇ ಸಾವು: ಸಿಬಿಐ ವರದಿ

Hindu activists appearing in court for 5 years in Paresh Mesta death case Anger against MLA Dinakar Shetty

ಕಾರವಾರ: ರಾಜ್ಯಾದ್ಯಂತ ಭಾರಿ ಆಕ್ರೋಶವನ್ನು ಹುಟ್ಟುಹಾಕಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕ ಪರೇಶ್‌ ಮೇಸ್ತಾ ಸಾಯುವುದಕ್ಕಿಂತ ಕೆಲವೇ ಗಂಟೆಗಳ ಮೊದಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ. ಆ ಬಳಿಕ ನಡೆದ ಗಲಾಟೆ ಸಂದರ್ಭದಲ್ಲಿ ಆತ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸಿಬಿಐ ಹೇಳಿದೆ. ಅಲ್ಲದೆ, ಸಾಯುವ ೨ ದಿನ ಮೊದಲು ಆತ ತನ್ನ ಮುಂಗೈ ಮೇಲೆ ಶಿವಾಜಿ ಟ್ಯಾಟೂವನ್ನು ಹಾಕಿಸಿಕೊಂಡಿದ್ದ ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ.

ಹೊನ್ನಾವರದ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿದ್ದ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ೨೦೧೭ರಲ್ಲಿ ನಡೆದಿದ್ದ ಪರೇಶ್‌ ಮೇಸ್ತಾ ಸಾವು ಪ್ರಕರಣವು ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದಲ್ಲದೆ, ರಾಜಕೀಯವಾಗಿಯೂ ಸಾಕಷ್ಟು ಸದ್ದು ಮಾಡಿತ್ತು. ಭಾರಿ ಒತ್ತಡದ ನಡುವೆ ಸಿಬಿಐಗೆ ಪ್ರಕರಣವನ್ನು ವಹಿಸಲಾಗಿತ್ತು. ಆದರೆ, ಸುದೀರ್ಘ ಸುಮಾರು ನಾಲ್ಕೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಇದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಪ್ರಕರಣಕ್ಕೆ ತೆರೆ ಎಳೆದು, ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಿತ್ತು.

ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಸಿಬಿಐ ವರದಿಯಲ್ಲಿ ಪರೇಶ್‌ ಮೇಸ್ತಾ ಸಾವಿನ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು, ಹಲವಾರು ಸಾಕ್ಷಿಗಳನ್ನು ಮಾತನಾಡಿಸಿದ್ದಾರೆ. ಸಾಕಷ್ಟು ಮಾಹಿತಿಗಳನ್ನು ಕಂಡುಕೊಂಡಿದ್ದಾರೆ. ಇದರ ಜತೆಗೆ ಪರೇಶ್‌ ಮೇಸ್ತ ಸಾವಿಗಿಂತ ಮೊದಲಿನ ನಡವಳಿಕೆಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಆತ ಯಾವುದೇ ಯುವತಿಯನ್ನು ಪ್ರೀತಿಸುತ್ತಿರಲಿಲ್ಲ ಎಂಬುದನ್ನೂ ಸಹ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ | ವಕ್ಫ್‌ ಮಂಡಳಿ ಉಪಾಧ್ಯಕ್ಷತೆ| ಪರೇಶ್‌ ಮೇಸ್ತಾ ಪ್ರಕರಣದ ಪ್ರಧಾನ ಆರೋಪಿ ನೇಮಕಕ್ಕೆ ಸರಕಾರ ತಡೆ

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹಾಜರು
2017ರ ಡಿಸೆಂಬರ್ 6ರಂದು ಕುಮಟಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಇದರಲ್ಲಿ ಪರೇಶ್‌ ಮೇಸ್ತಾ ಭಾಗಿಯಾಗಿದ್ದ. ಮಧ್ಯಾಹ್ನ ೧೨.೩೦ರ ಸುಮಾರಿಗೆ ನಡೆದಿದ್ದ ಈ ಕಾರ್ಯಕ್ರಮವನ್ನು ಮುಗಿಸಿದ್ದ ಪರೇಶ್‌ ಮೇಸ್ತ ಪುನಃ ಸಂಜೆ ೫.೪೫ಕ್ಕೆ ತನ್ನ ಮನೆಗೆ ವಾಪಸ್‌ ಆಗಿದ್ದ. ಹೊನ್ನಾವರದಿಂದ ಕುಮಟಾ ಸುಮಾರು ೨೫ ಕಿ.ಮೀ.ನಷ್ಟು ದೂರವಿದೆ. ಅಲ್ಲಿವರೆಗೆ ತೆರಳಿ ವಾಪಸ್‌ ಆಗಿದ್ದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಅಲ್ಲಿಂದ ಸುಮಾರು ೬.೪೫ರಿಂದ ೭ ಗಂಟೆ ಹೊತ್ತಿಗೆ ತಾನು ಶನೇಶ್ವರ ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಹೊನ್ನಾವರದ ತುಳಸಿ ನಗರಕ್ಕೆ ಹೋಗಿದ್ದ. ತನ್ನ ಸ್ನೇಹಿತ ಅತುಲ್‌ ಮೇಸ್ತಾನನ್ನೂ ಜತೆಯಲ್ಲಿ ಕರೆದೊಯ್ದಿದ್ದ. ಅಲ್ಲಿ ತಾನು ಅಯ್ಯಪ್ಪ ಮಾಲೆ ಧರಿಸಲು ಶಬರಿ ಮಲೆಗೆ ಹೋಗುತ್ತಿದ್ದೇನೆ. ಅಪ್ಪ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸ್ನೇಹಿತನ ಬಳಿ ಹೇಳಿದ್ದಲ್ಲದೆ, ಹಾಡು ಕೇಳಲು ಸ್ನೇಹಿತನ ಮೊಬೈಲ್‌ ಅನ್ನು ಪಡೆದುಕೊಂಡಿದ್ದ. ಅಲ್ಲಿಂದ ಇನ್ನೊಬ್ಬ ಸ್ನೇಹಿತ ದೀಪಕ್‌ ಮೆಹ್ತಾ ಮನೆಗೆ ತೆರಳಿ ಆತನ ಸ್ಕೂಟರ್‌ ಪಡೆದು ಸುಮಾರು ೮.೧೫ರ ಸುಮಾರಿಗೆ ವೈನ್‌ ಶಾಪ್‌ಗೆ ತೆರಳಿ ಬಿಯರ್‌ ಖರೀದಿಸಿದ್ದ. ಆದರೆ, ಅಲ್ಲಿ ಸ್ಕೂಟರ್‌ ಸ್ಟಾರ್ಟ್‌ ಆಗಿರಲಿಲ್ಲ. ಕಳೆದ ೧೫ ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ಕಾಲಿಗೆ ಪೆಟ್ಟಾಗಿದ್ದರಿಂದ ಕಿಕ್‌ ಮಾಡಲು ಪರೇಶ್‌ ಮೇಸ್ತಾಗೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇನ್ನೊಬ್ಬ ಸ್ನೇಹಿತ ಶರತ್‌ ಮೇಸ್ತಾನನ್ನು ಕರೆದು ಸ್ಟಾರ್ಟ್‌ ಮಾಡಿಕೊಡಲು ಕೋರಿದ್ದ. ಆತ ಸ್ಟಾರ್ಟ್‌ ಮಾಡಿಕೊಟ್ಟಿದ್ದಲ್ಲದೆ, ಬ್ಯಾಟರಿ ಸಮಸ್ಯೆ ಇದೆ ಎಂದೂ ತಿಳಿಸಿದ್ದ. ಅದಾಗಲೇ ಅಲ್ಲಿನ ಗುಡ್‌ಲಕ್‌ ಸರ್ಕಲ್‌ ಬಳಿ ಕೋಮು ಗಲಭೆ ಆಗುತ್ತಿದ್ದ ಬಗ್ಗೆ ಪರೇಶ್‌ ಮೇಸ್ತಾನಿಗೆ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಬೈಕ್‌ ಹತ್ತಿದ ಪರೇಶ್‌ ಅಲ್ಲಿಂದ ಸೀದಾ ಸೇಂಟ್‌ ಥಾಮಸ್‌ ಶಾಲೆಯ ಮೈದಾನಕ್ಕೆ ತೆರಳಿ ಅಲ್ಲಿದ್ದ ಸ್ನೇಹಿತ ಅಶೋಕ್‌ ಮೇಸ್ತಾನಿಗೆ ಸ್ಕೂಟರ್‌ ಕೀ ಕೊಟ್ಟು, “ಗುಡ್‌ಲಕ್‌ ಸರ್ಕಲ್‌ನಲ್ಲಿ ಹಿಂದು-ಮುಸ್ಲಿಂ ಸಮುದಾಯದ ಕೋಮುಗಲಭೆ ಆಗುತ್ತಿದೆ” ಎಂಬ ವಿಷಯವನ್ನು ತಿಳಿಸಿ ತೆರಳಿದ್ದ. ಅದಾದ ಬಳಿಕ ಆತ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಡಿ.೭ರಂದು ನಾಪತ್ತೆ ಪ್ರಕರಣ ದಾಖಲು
ಡಿಸೆಂಬರ್‌ ೭ರಂದು ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪರೇಶ್‌ ಮೇಸ್ತಾ ತಂದೆ ಕಮಲಾಕರ್‌ ಮೇಸ್ತಾ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ತನಿಖೆ ಕೈಗೊಂಡ ಪೊಲೀಸರಿಗೆ ಡಿ.೮ರಂದು ಶೆಟ್ಟಿಕೆರೆಯಲ್ಲಿ ಪರೇಶ್‌ ಮೇಸ್ತಾನ ಶವ ಪತ್ತೆಯಾಗಿತ್ತು.

ಅಯ್ಯಪ್ಪ ಮಾಲೆ ಧರಿಸುವುದಾಗಿ ಹೇಳಿದ್ದ
ಈ ಮಧ್ಯೆ ಸ್ನೇಹಿತರ ಒಡನಾಟವನ್ನು ಹೆಚ್ಚಿಸಿಕೊಂಡಿದ್ದ ಪರೇಶ್‌ ಮೇಸ್ತಾ ಅಯ್ಯಪ್ಪ ದೇವರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸುವುದಾಗಿ ಮನೆಯಲ್ಲಿ ಹೇಳಿದ್ದಲ್ಲದೆ, ಮಾಲೆ ಧಾರಣೆಗೆ ಶಬರಿಮಲೆಗೆ ಹೋಗಿಬುರುವುದಾಗಿ ತಂದೆ ಬಳಿ ಒಪ್ಪಿಗೆಯನ್ನೂ ಪಡೆದುಕೊಂಡಿದ್ದ.

ಮೀನು ವ್ಯಾಪಾರ ಮಾಡಿಕೊಂಡಿದ್ದ
೯ನೇ ತರಗತಿ ನಪಾಸಾಗಿದ್ದ ಪರೇಶ್‌ ಮೇಸ್ತಾ ಶಾಲೆ ಬಿಟ್ಟಿದ್ದ. ಬಳಿಕ ಬೆಂಗಳೂರಿಗೆ ತೆರಳಿ ಸ್ನೇಹಿತ ಆಕಾಶ್‌ ಮೇಸ್ತಾನಿಗೆ ಬೇಕರಿಯೊಂದರಲ್ಲಿ ಸಹಾಯಕನಾಗಿ ೭-೮ ತಿಂಗಳು ಕೆಲಸ ಮಾಡಿದ್ದ. ಆದರೆ, ಸಂಬಳ ತೀರಾ ಕಡಿಮೆ ಎಂದು ಹೇಳಿ ಅಲ್ಲಿಂದ ವಾಪಸ್‌ ಹೊನ್ನಾವರಕ್ಕೆ ತೆರಳಿದ್ದ. ಹೊನ್ನಾವರದಲ್ಲಿ ಕಾಸರಗೋಡಿನ ಬೋಟ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಮೀನಿನ ವ್ಯಾಪಾರದ ಲೆಕ್ಕಾಚಾರ ಮಾಡಿಕೊಂಡಿದ್ದ. ಹಲವು ವರ್ಷಗಳ ನಂತರ ತಾನೇ ಮೀನು ವ್ಯಾಪಾರವನ್ನೂ ಶುರು ಮಾಡಿದ್ದ.

ಕೆಲವು ಸಮಯ ಮನೆಗೆ ಬರುತ್ತಿರಲಿಲ್ಲ
ಪರೇಶ್‌ ಮೇಸ್ತಾ ತಾನೇ ದುಡಿಮೆಗಿಳಿದ ಬಳಿಕ ಕೆಲವು ಸಮಯ ಮನೆಗೆ ಬರುತ್ತಿರಲಿಲ್ಲ. ಅಲ್ಲದೆ, ಆಗಾಗ ಮದ್ಯ ಸೇವಿಸಿಯೂ ಬರುತ್ತಿದ್ದ. ಹೆಚ್ಚಾಗಿ ಸ್ನೇಹಿತರ ಸಂಗಡ ಇರುತ್ತಿದ್ದ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲ ವಿಚಾರಗಳನ್ನು ಪರೇಶ್ ಮೇಸ್ತಾನ ಸ್ನೇಹಿತರು, ಒಡನಾಡಿಗಳು ಸೇರಿದಂತೆ ಇನ್ನಿತರ ಸಂಗತಿಗಳನ್ನೊಳಗೊಂಡು ವಿಚಾರಣೆ ನಡೆಸಿದ್ದ ಸಿಬಿಐ ತಂಡವು ಮಾಹಿತಿಯನ್ನು ಕಲೆಹಾಕಿದೆ.

ಸಿಬಿಐ ಮರು ತನಿಖೆಗೆ ಸ್ಪೀಕರ್‌ ಕಾಗೇರಿ ಒತ್ತಾಯ
ಪರೇಶ್‌ ಮೇಸ್ತಾ ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದ್ದ ಬೆನ್ನಲ್ಲೇ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಪ್ರಕರಣ ಬೇರೆಯೇ ಇದ್ದು, ಸಿಬಿಐ ಮರು ತನಿಖೆ ನಡೆಸಬೇಕು. ಈ ಬಗ್ಗೆ ತಾವು ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ | ಪರೇಶ್ ಮೇಸ್ತಾ ಸಾವು ಪ್ರಕರಣ ಸಿಬಿಐನಿಂದಲೇ ಮರು ತನಿಖೆಯಾಗಲಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

Exit mobile version