Site icon Vistara News

Belagavi mahanagara palike: ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಯುಗಾಂತ್ಯ, ಬಿಜೆಪಿ ಪರ್ವ ಆರಂಭ, ಇಂದು ಮೇಯರ್‌ ಚುನಾವಣೆ

belagavi muncipality

ಬೆಳಗಾವಿ: ಬೆಳಗಾವಿ ಮಹಾನಗರದ 21ನೇ ಅವಧಿಯ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದೆ. 16 ತಿಂಗಳ ಬಳಿಕ ‌ಮೇಯರ್- ಉಪಮೇಯರ್ ಚುನಾವಣೆ ಇಂದು ನಡೆಯುತ್ತಿದ್ದು, ಸದಸ್ಯಬಲದಲ್ಲಿ ಪಾರಮ್ಯ ಸಾಧಿಸಿರುವ ಬಿಜೆಪಿ ಈ ನಿಟ್ಟಿನಲ್ಲಿ ಮುನ್ನಡೆ ಇಡಲಿದೆ.

ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಮೇಯರ್, ಡೆಪ್ಯುಟಿ ಮೇಯರ್ ಒಮ್ಮತದ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಭೆಗೂ ಮುನ್ನ ಬಿಜೆಪಿಯವರೇ ಮೇಯರ್, ಡೆಪ್ಯುಟಿ ಮೇಯರ್ ಆಗ್ತಾರೆ ಎಂದು ಸುರಾನಾ ಹೇಳಿದ್ದರು.

ಡೆಪ್ಯುಟಿ ಮೇಯರ್ ಹುದ್ದೆಗೆ ಬಿಜೆಪಿಯಿಂದ ರೇಷ್ಮಾ ಪಾಟೀಲ್‌ರಿಂದ ನಾಮಪತ್ರ ಸಲ್ಲಿಕೆ ಸಾಧ್ಯತೆ ಇದೆ. ಎಂಇಎಸ್‌ನಿಂದಲೂ ಡೆಪ್ಯುಟಿ ಮೇಯರ್ ಹುದ್ದೆಗೆ ವೈಶಾಲಿ ಭಾತಖಾಂಡೆ ನಾಮಪತ್ರ ಸಲ್ಲಿಕೆ ಸಾಧ್ಯತೆ ಇದೆ. ಮೇಯರ್ ಹುದ್ದೆ ಅವಿರೋಧವಾಗಿ ಆಯ್ಕೆಯಾದರೆ ಡೆಪ್ಯುಟಿ ಮೇಯರ್ ಹುದ್ದೆಗೆ ಚುನಾವಣೆ ನಡೆಯಬಹುದು. ಕೈ ಎತ್ತುವ ಮೂಲಕ ಮತದಾನಕ್ಕೆ ಅವಕಾಶ ಇದೆ.

ಕನ್ನಡ ಭಾಷಿಕರಿಗೆ ಮೇಯರ್ ಹುದ್ದೆ ನೀಡಬೇಕು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ತೆಗೆದುಕೊಳ್ಳಬೇಕು ಎಂದು ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳಿಗೆ ಕರವೇ ಆಗ್ರಹಿಸಿದೆ. ಕರವೇ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಕನ್ನಡ ಭಾಷಿಕರಿಗೆ ಬಿಜೆಪಿ ಮೇಯರ್ ಹುದ್ದೆ ನೀಡುತ್ತದೆಯೇ ನೋಡಬೇಕಿದೆ.

ಚುನಾವಣೆ ಯಾವಾಗ?

ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿದೆ. ಮಧ್ಯಾಹ್ನ 3ಕ್ಕೆ ಪರಿಷತ್ ಹಾಲ್‌ನಲ್ಲಿ ಸಭೆ ಸೇರಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಕ್ರಮಬದ್ಧವಾಗಿರುವ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಡಾ. ಎಂ.ಜಿ ಹಿರೇಮಠ ಕಾರ್ಯನಿರ್ವಹಣೆ ಮಾಡಲಿದ್ದಾರೆ.

ಹೇಗಿದೆ ಸದಸ್ಯರ ಬಲಾಬಲ?

ಒಟ್ಟು 58 ಸದಸ್ಯತ್ವ ಬಲಾಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ- 35, ಕಾಂಗ್ರೆಸ್-10, ಎಐಎಂಐಎಂ – 1, ಎಂಇಎಸ್ 3, ಪಕ್ಷೇತರರು – 9 ಸದಸ್ಯರು ಆಯ್ಕೆಯಾಗಿದ್ದಾರೆ. 35 ಸದಸ್ಯರ ಜೊತೆಗೆ ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಬೆಳಗಾವಿ ಸಂಸದೆ ಮಂಗಲ ಅಂಗಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ನಾಮನಿರ್ದೇಶನ ಪರಿಷತ್ ಸದಸ್ಯ ಡಾ ಸಂಬಣ್ಣ ತಳವಾರಗೂ ಮತದಾನದ ಹಕ್ಕು ಇದೆ.

ಮೇಯರ್ ಚುನಾವಣೆಯಲ್ಲಿ ಪಾಲಿಕೆ ಸದಸ್ಯರ ಜೊತೆಗೆ ಬಿಜೆಪಿಯ ಮತಗಳ ಸಂಖ್ಯೆ 40. 10 ಸದಸ್ಯರ ಜೊತೆಗೆ ಶಾಸಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕಾಂಗ್ರೆಸ್ ಬಳಿ 12 ಮತಗಳು ಇವೆ. ಎಂಇಎಸ್, ಪಕ್ಷೇತರರು, ಎಐಎಂಐಎಂ ಬೆಂಬಲ‌ ಸೂಚಿಸಿದರೂ ಕಾಂಗ್ರೆಸ್ ಬಲ 25 ಮಾತ್ರ.

ಮರಾಠಾ ಮತಗಳೇ ನಿರ್ಣಾಯಕ?

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ‌ಬೆಳಗಾವಿ ಮೇಯರ್- ಡೆಪ್ಯುಟಿ ಮೇಯರ್ ‌ಚುನಾವಣೆ ನಡೆಯುತ್ತಿದ್ದು, ಮರಾಠಾ ಟ್ರಂಪ್ ಕಾರ್ಡ್ ಬಳಸಿ ನಾಲ್ಕು ಕ್ಷೇತ್ರದ ಮರಾಠಾ ಮತ ಪಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ.

ಬೆಳಗಾವಿ ದಕ್ಷಿಣ, ಖಾನಾಪುರ, ಬೆಳಗಾವಿ ಗ್ರಾಮೀಣ,‌ ನಿಪ್ಪಾಣಿಯಲ್ಲಿ ಮರಾಠಾ ಮತಗಳೇ ನಿರ್ಣಾಯಕವಾಗಿವೆ. ಮೇಯರ್, ಡೆಪ್ಯುಟಿ ‌ಮೇಯರ್ ಸ್ಥಾನವನ್ನು ಮರಾಠಾ ಸಮುದಾಯಕ್ಕೆ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿವೆ. ಮೇಯರ್ ಸ್ಥಾನಕ್ಕೆ ಲಿಂಗಾಯತ, ಮರಾಠಾ, ಬ್ರಾಹ್ಮಣ, ನೇಕಾರ ಸಮುದಾಯದ ಮಧ್ಯೆ ಪೈಪೋಟಿ ಇದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿಗೆ ಬಹುಮತ ದೊರೆತಿದೆ. 2021ರ ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಒಟ್ಟು 58 ಸದಸ್ಯತ್ವ ಬಲಾಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 16 ಸದಸ್ಯೆಯರ ಪೈಕಿ 7 ಜನ ಮೇಯರ್ ಸ್ಥಾನಕ್ಕೆ ಅರ್ಹರು, ಇದರಲ್ಲಿ ಐವರ ಮಧ್ಯೆ ಪೈಪೋಟಿ ಇದೆ. ವಾಣಿ ಜೋಶಿ (ಬ್ರಾಹ್ಮಣ), ಸಾರಿಕಾ ಪಾಟೀಲ್ (ಮರಾಠಾ), ಸವಿತಾ ಪಾಟೀಲ್ (ಲಿಂಗಾಯತ), ಶೋಭಾ ಸೋಮನಾಚೆ (ಮರಾಠಾ), ದೀಪಾಲಿ ಟೋಪಗಿ (ನೇಕಾರ) ಮಧ್ಯೆ ಪೈಪೋಟಿ ಇದೆ.

Exit mobile version