ಬೆಳಗಾವಿ: ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ದಾನಿಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Belagavi News) ತಿಳಿಸಿದರು.
ಆರೋಗ್ಯ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ಇಂದು ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸಿ, ಗೌರವಿಸುವುದರ ಜತೆಗೆ ರಾಜ್ಯ ಸರ್ಕಾರದ ಪ್ರಶಂಸಾ ಪತ್ರ ವಿತರಿಸಿ ಅವರು ಮಾತನಾಡಿದರು.
ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ. ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅಂಗಾಂಗ ದಾನವನ್ನು ಪ್ರೇರಿಪಸಲು ಆರೋಗ್ಯ ಇಲಾಖೆ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಇನ್ನು ಮುಂದೆ ದಾನಿಗಳ ಮನೆಗಳಿಗೇ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸನ್ಮಾನಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ಸ್ವಾತಂತ್ರ್ಯ ದಿನಾಚಾರಣೆಯ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂಗಾಂಗ ದಾನಿಗಳನ್ನು ಸನ್ಮಾನಿಸಿ, ಗೌರವಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.
ಅಂಗಾಂಗ ದಾನಕ್ಕೆ ಯಾವುದೇ ಧರ್ಮದಲ್ಲಿ ಅಡ್ಡಿ ಇಲ್ಲ. ಅಂಗಾಂಗ ದಾನ ಮಾಡಿದರೆ ಪುನರ್ಜನ್ಮಕ್ಕೆ ತೊಂದರೆಯಾಗುತ್ತೆ ಎಂಬ ಕೆಲ ಮೂಢನಂಬಿಕೆಗಳು ಜನರಲ್ಲಿವೆ. ಪುನರ್ಜನ್ಮ ಗ್ಯಾರಂಟಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ ನೀವು ಮಾಡುವ ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಯುವುದು ಗ್ಯಾರಂಟಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: Moon: ಭೂಮಿಯಿಂದ ದೂರ ಹೊರಟ ಚಂದ್ರ, ಶೀಘ್ರದಲ್ಲೇ ದಿನಕ್ಕೆ 24 ಅಲ್ಲ 25 ಗಂಟೆಗಳು ಇರಲಿವೆ!
ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿ
2023 ನೇ ಸಾಲಿನಲ್ಲಿ 178 ಅಂಗಾಂಗ ದಾನ ನಡೆದಿದ್ದು, ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಗೂ ಅಂಗಾಂಗಗಳ ಪೂರೈಕೆಗೂ ಅಜಗಜಾಂತರ ಅಂತರವಿದೆ. ಅತ್ಯಂತ ಬೇಡಿಕೆಯುಳ್ಳ, ಅಂಗ ಎಂದರೆ ಮೂತ್ರಪಿಂಡ, ಒಟ್ಟಾರೆಯಾಗಿ 8,500 ಕ್ಕೂ ಹೆಚ್ಚು ಜನರು ಅಂಗಾಂಗಳಿಗಾಗಿ ಜೀವಸಾರ್ಥಕತೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.
ಮೆದುಳು ನಿಷ್ಕ್ರಿಯವಾದ ಒಬ್ಬ ಮಾನವನ ಅಂಗಾಂಗ ದಾನ ಮಾಡುವುದರ ಮೂಲಕ 8 ಜನರ ಜೀವ ಉಳಿಸಬಹುದಾಗಿದೆ. ಚರ್ಮ, ಮೂಳೆ, ಅಸ್ಥಿಮಜ್ಜೆ, ಹೃದಯದ ಕವಾಟಗಳು ಇತ್ಯಾದಿ ಅಂಗಾಂಶಗಳನ್ನು ದಾನ ಮಾಡುವುದರ ಮೂಲಕ 50ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಜೀವನ ನೀಡಬಹುದು.
ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 63 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಪ್ರತಿಜ್ಞೆ ಮಾಡುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. QR code scan ಮಾಡುವ ಮೂಲಕ ಎಲ್ಲಿಂದಲಾದರೂ ನೀವು ಬಯಸಿದ ಅಂಗಾಂಗಗಳು ಮತ್ತು ಅಂಗಾಂಶಗಳ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.
ರಾಜ್ಯದಲ್ಲಿ ಸುಮಾರು 78ಕ್ಕೂ ಹೆಚ್ಚು ಅಂಗಾಂಗ ಕಸಿ ಕೇಂದ್ರ ಜೀವಸಾರ್ಥಕತೆ ಅಡಿಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇದರಲ್ಲಿ ಬೆಳಗಾವಿ ವಿಭಾಗದಲ್ಲಿ ಏಳು ಆಸತ್ರೆಗಳಲ್ಲಿ ಅಂಗಾಂಗ ಕಸಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕೆ.ಎಲ್.ಇ ಆಸತ್ರೆ, ಕಿಡ್ನಿ, ಲಿವರ್, ಹೃದಯ ಅಂಗಾಂಗ ಕಸಿ ಸೌಲಭ್ಯ ಲಭ್ಯವಿದೆ.
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇದುವರೆಗೂ 27 ಕಿಡ್ನಿ (Kidney) ಅಂಗಾಂಗ ಕಸಿ ಮಾಡಲಾಗಿದೆ.. ಎಲ್ಲಾ ವೈದ್ಯಕೀಯ ಕಾಲೇಜಿನ ಆಸತ್ರೆಗಳನ್ನು ಜಿಲ್ಲಾ ಆಸತ್ರೆಗಳನ್ನು NTHORC-Non Transplant Human Organ Retrieval Centers ಆಗಿ ಸ್ಥಾಪಿಸಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.
ಈಗಾಗಲೇ 26 NTHORC ಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ ನಿಮಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಟ್ರಾಮಾ ಕೇರ್ ಕೂಡ ಸೇರಿದೆ. Institute Of Nephro Urology (NU) ಮತ್ತು Institute of Gastroenterology Sciences & Organ Transplant (IGOT) ನಡೆಯುತ್ತಿವೆ. ಇಲ್ಲಿಯವರೆಗೆ 281 ಬಿಪಿಎಲ್ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಅಂಗಾಂಗ ಕಸಿ ವೆಚ್ಚ ಭರಿಸಲಾಗಿದೆ.
ಇದನ್ನೂ ಓದಿ: KCET 2024 : ನೀಟ್ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು
ಯಾವ ಧರ್ಮದಲ್ಲೂ ಅಂಗಾಂಗ ದಾನ ನಿಷಿದ್ಧವಿಲ್ಲ, ಕರ್ನಾಟಕ ರಾಜ್ಯದಲ್ಲೇ ಎಲ್ಲಾ ಧರ್ಮದವರು ಅಂಗಾಂಗ ದಾನ ಮಾಡಿರುವ ನಿದರ್ಶನಗಳಿವೆ. ಕೆ.ಎಲ್.ಇ ಆಸ್ಪತ್ರೆಯ ವೈದ್ಯರುಗಳು ನಡೆಸಿರುವ ವಿಶೇಷ ಅಂಗಾಂಗ ಕಸಿಯಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲದೆ ಹಿಂದೂ ಹೃದಯ ದಾನಿಯಿಂದ ಪಡೆದ ಅಂಗವನ್ನು ಕ್ರಿಶ್ಚಿಯನ್ ವೈದ್ಯರು ಮುಸ್ಲಿಂ ರೋಗಿಯ ದೇಹಕ್ಕೆ ಕಸಿ ಮಾಡಿ ಭಾವೈಕತೆ ಸಾರಿದ್ದಾರೆ.