Site icon Vistara News

16 ಟ್ರ್ಯಾಪ್‌ ಕ್ಯಾಮೆರಾ, 8 ಬೋನು, 50 ಸಿಬ್ಬಂದಿ, 6 ದಿನವಾದರೂ ಸಿಕ್ಕಿಲ್ಲ ಬೆಳಗಾವಿ ಚಿರತೆ

cheetah

ಬೆಳಗಾವಿ: ಇಲ್ಲಿನ ಜಾಧವ್‌ ನಗರ ಪ್ರದೇಶಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದಲ್ಲದೆ, ಇನ್ನೂ ಅಲ್ಲೇ ಅಡಗಿಕೊಂಡಿದೆ ಎಂದು ಹೇಳಲಾದ ಚಿರತೆಯನ್ನು ಆರು ದಿನವಾದರೂ ಪತ್ತೆ ಹಚ್ಚಿ ಬೋನಿಗೆ ಕೆಡವಲು ಸಾಧ್ಯವಾಗಿಲ್ಲ. ಹೀಗಾಗಿ ಜಾಧವ್‌ ನಗರದ ನಿವಾಸಿಗಳು ಆಗಸ್ಟ್‌ ಐದರಿಂದ ನಿರಂತರವಾಗಿ ಪ್ರಾಣ ಭಯದಲ್ಲೇ ಇರುವಂತಾಗಿದೆ.

ಆಗಸ್ಟ್‌ ೫ರಂದು ಮಧ್ಯಾಹ್ನ ೧೨.೨೩ಕ್ಕೆ ಗೋಡೆ ಹಾರಿ ಬಂದ ಚಿರತೆ ಕಟ್ಟಡ ಕಾರ್ಮಿಕ ಖನಗಾವಿ ಕೆ.ಎಚ್‌. ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಾಜ್‌ಕರ್‌ (೩೮) ಅವರ ಮೇಲೆ ದಾಳಿ ನಡೆಸಿದ ಚಿರತೆ ಬಳಿಕ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸಿದರಾಯಿ ಅವರು ಹೇಗೋ ಚಿರತೆ ಬಾಯಿಯಿಂದ ಬಚಾವಾಗಿದ್ದಾರೆ. ಅವರ ಕುತ್ತಿಗೆ ಭಾಗಕ್ಕೇ ದಾಳಿ ಮಾಡಿದ ಚಿರತೆ ಕೊನೆಗೆ ಓಡಿ ಹೋಗಿದೆ. ಈ ನಡುವೆ, ಮಿರಾಜ್‌ ಕರ್‌ ಅವರ ಮೇಲೆ ಚಿರತೆ ದಾಳಿ ಆದ ಸುದ್ದಿ ಕೇಳಿ ಅವರ ತಾಯಿ ಹೃದಯಾಘಾತಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ ದಾಳಿ ಮಾಡಿದ ಚಿರತೆ ಅಲ್ಲೇ ಎಲ್ಲೋ ಅಡಗಿಕೊಂಡಿದೆ ಎಂಬ ಮಾಹಿತಿಯ ಮೇರೆ ಕಳೆದ ಆರು ದಿನಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಯಲಾಗುತ್ತಿದೆ. ಜಾಧವ್‌ ನಗರದ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಈ ಪ್ರದೇಶದ ೨೨ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿದೆ. ಮನೆ ಮಂದಿ ಬಿಗಿ ಭದ್ರತೆಯ ನಡುವೆ ತಮ್ಮ ಅಗತ್ಯದ ಕೆಲಸಗಳಿಗೆ ಹೋಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಎಲ್ಲಿದೆ ಚಿರತೆ?
ವಿವಿಧೆಡೆ 8 ಬೋನು ಇಡಲಾಗಿದೆ. 16 ಟ್ರ್ಯಾಪ್ ಕ್ಯಾಮೆರಾ ಅಳವಡಿಸಲಾಗಿದೆ. ೫೦ ಸಿಬ್ಬಂದಿಗಳು ಎಲ್ಲ ಕಡೆ ಕಾಯುತ್ತಿದ್ದಾರೆ. ಆದರೂ ಕೂಡಾ ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಆರು ದಿನ ಕಳೆದರೂ ಶೋಧ ಕಾರ್ಯವಷ್ಟೇ ಮುಂದುವರಿದಿದೆ.

ಎರಡು ಬಾರಿ ಕ್ಯಾಮೆರಾಗೆ ಕಂಡಿದೆ
ಚಿರತೆ ಎಲ್ಲಿ ಅಡಗಿಕೊಂಡಿದೆ ಎಂಬುದೇ ಈಗ ಎಲ್ಲರನ್ನು ಕಾಡುವ ಪ್ರಶ್ನೆ. ಬೆಳಗಾವಿಯ ಗಾಲ್ಫ್ ಕೋರ್ಸ್‌ನಲ್ಲಿ ಚಿರತೆ ಮನೆ ಮಾಡಿಕೊಂಡಿರಬಹುದು ಎನ್ನುವುದು ಬೆಳಗಾವಿ ಡಿಎಫ್ಒ ಆ್ಯಂಥೋನಿ ಮರಿಯಪ್ಪ ಅವರ ಹೇಳಿಕೆ. ಯಾಕೆಂದರೆ, ಈ ಭಾಗದಲ್ಲಿ ಇಟ್ಟಿರುವ ಅರಣ್ಯ ಇಲಾಖೆಯ ಟ್ರ್ಯಾಪ್ ಕ್ಯಾಮರಾದಲ್ಲಿ ಎರಡು ಬಾರಿ ಚಿರತೆ ಸೆರೆಯಾಗಿದೆ ಎಂದು ಹೇಳಲಾಗಿದೆ. ಜತೆಗೆ ಗಾಲ್ಫ್ ಕೋರ್ಸ್‌ನಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.

200 ಎಕರೆ ಪ್ರದೇಶದ ಗಾಲ್ಫ್ ಕೋರ್ಸ್ ಅರಣ್ಯದಂತೆಯೇ ಇರುವುದು ಚಿರತೆ ಅಡಗಿಕೊಂಡಿರಲು ಸಹಕಾರ ನೀಡಿದೆ ಎನ್ನಲಾಗಿದೆ. ಹೀಗಾಗಿ ಯಾರೂ ಕೂಡಾ ಆ ಭಾಗಕ್ಕೆ ವಾಯು ವಿಹಾರಕ್ಕೆ ಹೋಗಬಾರದು, ಸುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಹಾಗಂತ ಜನರು ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಡಿಎಫ್ಒ ಆ್ಯಂಥೋನಿ ಹೇಳಿದ್ದಾರೆ.

ಇದನ್ನೂ ಓದಿ| Leopard Attack | ಹಾಸನದಲ್ಲಿ ಮನೆ ಕಾಂಪೌಂಡ್‌ ಹಾರಿ ನಾಯಿ ಹೊತ್ತೊಯ್ದ ಚಿರತೆ

Exit mobile version