Site icon Vistara News

Belagavi Palike Election: ಬೆಳಗಾವಿ ಪಾಲಿಕೆ ಮೇಯರ್‌ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ್

Belagavi Palike Election

#image_title

ಬೆಳಗಾವಿ: ಚುನಾವಣಾ ಪ್ರಕ್ರಿಯೆಗೆ ಕಾಂಗ್ರೆಸ್ ಸದಸ್ಯರ ಬಹಿಷ್ಕಾರದ ನಡುವೆ ಬೆಳಗಾವಿ ಮಹಾನಗರ ಪಾಲಿಕೆ (Belagavi Palike Election) ಮೇಯರ್ ಆಗಿ ಬಿಜೆಪಿಯ ಶೋಭಾ ಸೋಮನಾಚೆ ಅವಿರೋಧ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ರೇಷ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಸದಸ್ಯರು, ಮೇಯರ್ ಮತ್ತು ಉಪಮೇಯರ್ ಚುನಾವಣೆ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೊರನಡೆದರು. ಬಳಿಕ ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ಸಮ್ಮುಖದಲ್ಲಿ ಚುನಾವಣೆ ಪಕ್ರಿಯೆ ನಡೆಯಿತು. ಉಪಮೇಯರ್ ಆಗಿ ಬಿಜೆಪಿಯ ರೇಷ್ಮಾ ಪಾಟೀಲ್ ಅವಿರೋಧ ಆಯ್ಕೆ ಹಾಗೂ ಉಪಮೇಯರ್‌ ಆಗಿ ರೇಷ್ಮಾ ಪಾಟೀಲ್‌ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಮೇಯರ್ ಶೋಭಾ ಸೋಮನಾಚೆ ಅವರು 57ನೇ ವಾರ್ಡ್ ನ ಬಿಜೆಪಿ ಸದಸ್ಯೆಯಾಗಿದ್ದರೆ, ಉಪ ಮೇಯರ್ ರೇಷ್ಮಾ ಪಾಟೀಲ 33ನೇ ವಾರ್ಡ್​ನ ಬಿಜೆಪಿ ಸದಸ್ಯೆಯಾಗಿದ್ದಾರೆ. ಇಬ್ಬರೂ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೇಯರ್‌ ಸ್ಥಾನಕ್ಕೆ ಬಿಜೆಪಿ ಕಾರ್ಪೊರೇಟರ್‌ ಶೋಭಾ ಸೋಮನಾಚೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯಾದರು. ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಕಾರ್ಪೊರೇಟರ್‌ ರೇಷ್ಮಾ ಪಾಟೀಲ್‌ 42 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಎಂಇಎಸ್ ಅಭ್ಯರ್ಥಿ ವೈಶಾಲಿ ಭಾತಕಾಂಡೆ (4 ಮತ) ವಿರುದ್ಧ ಗೆಲುವು ಸಾಧಿಸಿದರು. ಇದರಿಂದ ಮತ್ತೆ ಮರಾಠಿಗರಿಗೆ ಪಾಲಿಕೆ ಮೇಯರ್‌, ಉಪ ಮೇಯರ್‌ ಸ್ಥಾನ ಒಲಿದಂತಾಗಿದೆ.

ಇದನ್ನೂ ಓದಿ | Adani Group Shares: ಅದಾನಿಗಾಗಿ ಜನರ ಹಣ ಅಪಾಯದಲ್ಲಿಟ್ಟ ನರೇಂದ್ರ ಮೋದಿ: ದಿನೇಶ್‌ ಗುಂಡೂರಾವ್

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. 2021ರ ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿತ್ತು.

ಪಾಲಿಕೆ ಸದಸ್ಯರ ಬಲಾಬಲ?

ಒಟ್ಟು 58 ಸದಸ್ಯತ್ವ ಬಲಾಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ- 35, ಕಾಂಗ್ರೆಸ್-10, ಎಐಎಂಐಎಂ – 1, ಎಂಇಎಸ್ 3, ಪಕ್ಷೇತರರು – 9 ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿಗೆ 35 ಸದಸ್ಯರ ಜತೆಗೆ ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಬೆಳಗಾವಿ ಸಂಸದೆ ಮಂಗಲ ಅಂಗಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ನಾಮನಿರ್ದೇಶನ ಪರಿಷತ್ ಸದಸ್ಯ ಡಾ ಸಂಬಣ್ಣ ತಳವಾರಗೂ ಮತದಾನದ ಹಕ್ಕು ಇತ್ತು.

ಕಾಂಗ್ರೆಸ್ ಸದಸ್ಯರ ವಿರುದ್ಧ ಶಾಸಕ ಅಭಯ್ ಪಾಟೀಲ್ ಆಕ್ರೋಶ

ಬೆಳಗಾವಿ ಮೇಯರ್ ಆಗಿ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್ ಆಗಿ ರೇಷ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ. ಆದರೆ, ನೂತನ ಮೇಯರ್, ಉಪಮೇಯರ್‌ಗೆ ಅಭಿನಂದನೆ ಸಲ್ಲಿಸುವಷ್ಟು ಸೌಜನ್ಯ ಕಾಂಗ್ರೆಸ್‌ ಸದಸ್ಯರಿಗಿಲ್ಲ. ಬೆಳಗಾವಿ ಅಭಿವೃದ್ಧಿಗೆ ವಿರೋಧ ಇದೆ ಎಂದು ಮೊದಲ ದಿನವೇ ತೋರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ಮೊದಲ ಬಾರಿ ಮೇಯರ್ ಚುನಾವಣೆಗೆ ಎಲ್ಲರೂ ತಮ್ಮ ಮನೆಯಿಂದ ಬಂದಿದ್ದಾರೆ. ಈ ಮೊದಲು ರೆಸಾರ್ಟ್‌ಗಳಿಂದ ಮೇಯರ್ ಚುನಾವಣೆಗೆ ಬರುತ್ತಿದ್ದರು. ರೆಸಾರ್ಟ್ ರಾಜಕಾರಣ ಬೇಡ ಎಂದು ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಕ್ಕೆ ಜನರಿಗೆ ಧನ್ಯವಾದ. ಬೆಳಗಾವಿ ನಗರ ಅಭಿವೃದ್ಧಿಗೆ ಪೂರಕವಾಗಿ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಇಲ್ಲಿ ಇದ್ದವರು ಹಾಗೂ ಹೊರ ಹೋದವರಿಗೂ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

ರಾಜ್ಯದ ಕನ್ನಡಿಗರಿಗೆ ಬಿಜೆಪಿ ಮೋಸ: ಕರವೇ ಆರೋಪ

ಬೆಳಗಾವಿ: ರಾಜ್ಯದ ಕನ್ನಡಿಗರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಬೆಳಗಾವಿ ನೂತನ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಕರವೇ ನಾರಾಯಣಗೌಡ ಬಣ ಆರೋಪಿಸಿದೆ. ಈ ಬಗ್ಗೆ ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪಕ್ಷ ಆಧಾರಿತ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆಯನ್ನು ಬಿಜೆಪಿ ಏರಿದೆ. ಮರಾಠಿ ಭಾಷಿಕ ಸದಸ್ಯರಿಗೆ ಮೇಯರ್, ಉಪಮೇಯರ್ ಸ್ಥಾನ ನೀಡಿದೆ. ಈ ಮೂಲಕ ರಾಜ್ಯದ ಕನ್ನಡಿಗರಿಗೆ ಬಿಜೆಪಿ ಮೋಸ ಮಾಡಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಮರಾಠಿ ಭಾಷಿಕರಿಗೆ ನೀಡಿದ್ದರು. ಈಗ ಬೆಳಗಾವಿ ಮಹಾಪೌರ, ಉಪ ಮಹಾಪೌರ ಸ್ಥಾನ ಮರಾಠಿ ಭಾಷಿಕರಿಗೆ ನೀಡಿದ್ದಾರೆ. ಬೆಳಗಾವಿ ಬಿಜೆಪಿ ನಾಯಕರಿಗೆ ಕನ್ನಡ ಭಾಷಿಕರ ಬಗ್ಗೆ ಕಳಕಳಿ, ಗೌರವ ಇಲ್ಲ. ಬಿಜೆಪಿಗೆ ಮರಾಠಿ ಭಾಷಿಕರೇ ಮುಖ್ಯ ಎನ್ನುವುದನ್ನು ನಾಯಕರು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | Modi In Karnataka: ಶಿವಕುಮಾರ ಸ್ವಾಮೀಜಿಗಳ ಪರಂಪರೆಯನ್ನು ಸಿದ್ದಲಿಂಗ ಶ್ರೀ ಮುಂದುವರಿಸಿದ್ದಾರೆ: ಪ್ರಧಾನಿ ಮೋದಿ ಶ್ಲಾಘನೆ

ಎಂಇಎಸ್ ಸದಸ್ಯರನ್ನು ಬಂಧಿಸಿ

ಗೆಲ್ಲಿಸಲು ಮತ ಚಲಾಯಿಸಿದ ಕನ್ನಡಿಗರಿಗೆ ಅವಮಾನಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಬಿಜೆಪಿ ಅಸಲಿ ಮುಖ ಈಗ ಬಯಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನ ಪಾಠ ಕಲಿಸುತ್ತಾರೆ ಎಂದಿರುವ ಅವರು, ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಮೂವರು ಎಂಇಎಸ್ ಸದಸ್ಯರ ಬಂಧಿಸಬೇಕು. ಎಂಇಎಸ್ ನಗರಸೇವಕರ ಸದಸ್ಯ ಸ್ಥಾನ ರದ್ದು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

Exit mobile version