Site icon Vistara News

Belagavi session | ಸುವರ್ಣ ಸೌಧ ಕಟ್ಟಿಸಿದ್ದೇ ನಾನೆನ್ನುವ ಎಚ್‌.ಡಿ ಕುಮಾರಸ್ವಾಮಿ ಅಧಿವೇಶನಕ್ಕೇ ಗೈರು!

ಎಚ್.ಡಿ ಕುಮಾರಸ್ವಾಮಿ

ಬೆಳಗಾವಿ: ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದೇ ನಾನು. ಈ ಬಗ್ಗೆ ನಿರ್ಧಾರ ಮಾಡಿದ್ದೇ ನಾನು, ಇದು ನನ್ನ ಕನಸಿನ ಯೋಜನೆ ಎಂದು ಹೇಳಿಕೊಳ್ಳುತ್ತಿರುವ ಮತ್ತು ನಿಜಕ್ಕೂ ಯೋಜನೆ ಸಾಕಾರಗೊಳ್ಳುವುದರ ಹಿಂದೆ ಶಕ್ತಿಯಾಗಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಅಧಿವೇಶನದ (Belagavi session) ವಿಚಾರಕ್ಕೆ ಬಂದಾಗ ಮಾತ್ರ ಸದಾ ನಿರ್ಲಕ್ಷ್ಯವನ್ನೇ ತೋರುತ್ತಾರೆ!

ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಹೊರತುಪಡಿಸಿ ಬೇರೆ ಅವಧಿಯಲ್ಲಿ ಅವರು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರುತ್ತಾರೆ ಎಂಬ ಆಪಾದನೆ ಇದೆ. ಇದಕ್ಕೆ ಪೂರಕವಾಗಿ ಇಂದು (ಡಿಸೆಂಬರ್‌ ೧೯) ಆರಂಭವಾಗಲಿರುವ ಚಳಿಗಾಲದ ಅಧಿವೇಶನದಿಂದಲೂ ಅವರು ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಇದೆ.

ಕಳೆದ ಅಧಿವೇಶನದಲ್ಲಿ ಕಾಟಾಚಾರಕ್ಕೆ ಎಂಬಂತೆ ಕೆಲವು ದಿನ ಹೋಗಿ ಹಾಜರಿ ಹಾಕಿದ್ದ ಅವರು ಈ ಬಾರಿಯಂತೂ ಪಂಚ ರತ್ನ ರಥಯಾತ್ರೆ ಹಿನ್ನೆಲೆಯನ್ನು ಇಟ್ಟುಕೊಂಡು ಸದನಕ್ಕೆ ಗೈರಾಗಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ರಥಯಾತ್ರೆ ನಡೆಯುತ್ತಿದ್ದು, ಈ ಭಾಗದ ಶಾಸಕರು ಕೂಡಾ ಅಧಿವೇಶನಕ್ಕೆ ಹಾಜರಾಗುವುದು ಸಂಶಯ.

ಹೀಗಾಗಿ, ಒಟ್ಟಾರೆ ಅಧಿವೇಶನದ ನಿರ್ವಹಣೆಯನ್ನು ಶಾಸಕ ಬಂಡೆಪ್ಪ ಕಾಶೆಂಪೂರ್‌ ಅವರಿಗೆ ವಹಿಸಲಾಗಿದೆ. ಅವರು ಸದನದಲ್ಲಿ ಕೆಲವು ನಿಲುವಳಿ ಸೂಚನೆಗಳನ್ನು ಸದನದಲ್ಲಿ ಮಂಡಿಸಲಿದ್ದಾರೆ. ಜತೆಗೆ ವಿಪಕ್ಷಗಳ ನಿಲುವಳಿ ಸೂಚನೆಗೆ ಜೆಡಿಎಸ್‌ ಬೆಂಬಲ ಸೂಚಿಸಲಿದೆ.

ಶಾಸಕರ ಕ್ಷೇತ್ರವಾರು ಸಮಸ್ಯೆ, ಕ್ಷೇತ್ರಾಭಿವೃದ್ಧಿ ಬಗ್ಗೆ ಚರ್ಚೆ ನಡೆಸುವುದು, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಮತ್ತು ರಾಜ್ಯದ ಗಡಿ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತುವುದು, ಕೃಷ್ಣ, ಮಹಾದಾಯಿ ಸೇರಿದಂತೆ ರಾಜ್ಯದ ನೀರಾವರಿ ವಿಚಾರದ ಚರ್ಚೆ ಕುಮಾರಸ್ವಾಮಿ ಅನುಪಸ್ಥಿತಿಯಲ್ಲೇ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ನಡುವೆ ಸುವರ್ಣ ಸೌಧದಲ್ಲಿ ಸಾವರ್ಕರ್‌ ಸೇರಿದಂತೆ ಹಲವು ಗಣ್ಯರ ಫೋಟೊ ಇಡುವ ವಿಚಾರದಲ್ಲಿ ಗಲಾಟೆ ನಡೆಯಲಿದೆ, ಒಳಗೆ ಮತ್ತು ಹೊರಗೆ ಪ್ರತಿಭಟನೆಯ ಸಾಧ್ಯತೆ ಇದೆ. ಆದರೆ, ಇದರ ಬಗ್ಗೆ ಜೆಡಿಎಸ್‌. ನಿಲುವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ | ಬೆಳಗಾವಿ ಸದನದಲ್ಲಿ ಸಾವರ್ಕರ್ ಫೋಟೋ | ಕಾಂಗ್ರೆಸ್‌ ಬಳಿ ಏನಿದೆ ಪ್ರತ್ಯಸ್ತ್ರ?

Exit mobile version