Site icon Vistara News

Belagavi session | ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೊ: ಕಾಂಗ್ರೆಸ್‌ ಮೌನದ ಹಿಂದಿದ್ದಾರೆ ಸೋನಿಯಾ ಗಾಂಧಿ!

sonia savarkar

ಬೆಳಗಾವಿ: ವೀರ ಸಾವರ್ಕರ್‌ ಹೆಸರು ಕೇಳಿದ ತಕ್ಷಣ ಬುಸುಗುಡುತ್ತಿದ್ದ ಕಾಂಗ್ರೆಸ್‌ ನಾಯಕರು ಬೆಳಗಾವಿ ಸುವರ್ಣ ಸೌಧದಲ್ಲಿ (Belagavi session) ಅವರ ಫೋಟೊ ಹಾಕುವ ನಿರ್ಧಾರದ ವಿಚಾರದಲ್ಲಿ ಮೌನ ವಹಿಸಿದ್ದು ಯಾಕೆ ಎಂಬುದಕ್ಕೆ ಈಗ ಕಾರಣ ಬಯಲಾಗಿದೆ. ಆ ಕಾರಣದ ಹೆಸರು ಸೋನಿಯಾ ಗಾಂಧಿ!

ಹೌದು, ಸರ್ಕಾರ ಸಾವರ್ಕರ್‌ ಸೇರಿದಂತೆ ಏಳು ಮಂದಿ ಗಣ್ಯರ ಫೋಟೊ ಅನಾವರಣ ಮಾಡಲು ಮುಂದಾಗಿದೆ. ಕಾಂಗ್ರೆಸ್‌ ನಾಯಕರು ಈ ಬಾರಿ ಸಾವರ್ಕರ್‌ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಕದ್ದು ಮುಚ್ಚಿ ಫೋಟೊ ಅನಾವರಣ ಯಾಕೆ ಎಂದಷ್ಟೇ ಪ್ರಶ್ನಿಸುತ್ತಿದ್ದಾರೆ. ವಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಶಿಷ್ಟಾಚಾರದ ಮಾತುಗಳನ್ನು ಆಡಿದ್ದಾರೆ. ಅದರಾಚೆಗೆ ದೊಡ್ಡ ಸದ್ದು ಕೇಳುತ್ತಿಲ್ಲ. ಹೆಚ್ಚು ಕಡಿಮೆ ಸದನದಲ್ಲಿ ಈ ವಿಚಾರದ ಬಗ್ಗೆ ಯಾವ ಚರ್ಚೆ ನಡೆಯುವ ಸಾಧ್ಯತೆಯೂ ಕಾಣಿಸುತ್ತಿಲ್ಲ.

ಫೋಟೋ ಅನಾವರಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಇದನ್ನು ನಿರ್ಲಕ್ಷಿಸಲಿರುವ ಕಾಂಗ್ರೆಸ್‌, ಶಿಷ್ಟಾಚಾರ ಮುರಿಯಲಾಗಿದೆ ಎಂಬ ವಿಚಾರ ಇಟ್ಟುಕೊಂಡು ಹೊರಗಡೆ ಪ್ರತಿಭಟನೆ ನಡೆಸಲಿದೆ.

ಏನು ಮಾಡುತ್ತದೆ ಕಾಂಗ್ರೆಸ್‌?
ಕಾಂಗ್ರೆಸ್‌ ಸುವರ್ಣ ಸೌಧದ ಒಳಗಡೆ ಮೌನವಾಗಿದ್ದು, ಹೊರಗಡೆ ಪ್ರತಿಭಟನೆ ಮಾಡಲು ಮುಂದಾಗಿದೆ. ಅದರ ಪ್ರಧಾನ ಆಕ್ಷೇಪ ಎದುರಾಗಲಿರುವುದು ಸ್ಪೀಕರ್‌ ವಿರುದ್ಧ.

ವಿಧಾನ ಸಭಾ ಸಭಾಂಗಣದಲ್ಲಿ ಫೋಟೋ ಹಾಕಲು ಸದನ ಕಾರ್ಯ ಕಲಾಪಗಳ ಸಮಿತಿಯಲ್ಲಿ ಚರ್ಚೆ ಆಗಬೇಕು, ಬಳಿಕ ಒಂದು ಸಮಿತಿ ರಚನೆ ಆಗಬೇಕು, ಯಾವ ಫೋಟೋ ಹಾಕಬೇಕು ಅನ್ನೋದು ಸಮಿತಿ ನಿರ್ಧಾರ ಮಾಡಬೇಕು, ಬಳಿಕ ಸದನದ ಗಮನಕ್ಕೆ ತರಬೇಕು, ಯಾವುದಾದರೂ ಆಕ್ಷೇಪಗಳು ಇದ್ರೆ ಸದಸ್ಯರು ಹೇಳಿಕೊಳ್ಳಲು ಅವಕಾಶ ಕೊಡಬೇಕು, ಇದನ್ನು ಯಾವುದನ್ನೂ ಮಾಡದೇ ಸದಸ್ಯರಿಗೆ ಅಹ್ವಾನ ನೀಡಲಾಗಿದೆ. ಯಾರ ಫೋಟೋ ಹಾಕ್ತೀವಿ ಅನ್ನೋ ಮಾಹಿತಿ ನೀಡಿಲ್ಲ. ಇದರಲ್ಲಿ ಗೌಪ್ಯತೆ ಕಾಪಾಡಿದ್ದು ಯಾಕೆ ಅನ್ನೋ ಪ್ರಶ್ನೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪ್ರತಿಭಟನೆ ದಾಖಲಿಸಲಿದೆ.

ಸುವರ್ಣ ಸೌಧಕ್ಕೆ ಫೋಟೊ ಸಮೇತ ಬರ್ತಾರೆ
ಈ ನಡುವೆ ಕಾಂಗ್ರೆಸ್‌ ನಾಯಕರು ಸಂಗೊಳ್ಳಿ ರಾಯಣ್ಣ, ಬಸವಣ್ಣ, ಚೆನ್ನಮ್ಮ, ವಾಲ್ಮೀಕಿ, ನಾರಾಯಣ ಗುರು, ಶಿಶುನಾಳ ಷರೀಫ್, ಕುವೆಂಪು ಸೇರಿದಂತೆ ಹಲವರ ಫೋಟೊ ಸಮೇತ ಆಗಮಿಸಲಿದ್ದಾರೆ ಎನ್ನಲಾಗಿದೆ. ಎಲ್ಲ ಗಣ್ಯರ ಫೋಟೊವನ್ನು ಸುವರ್ಣ ಸೌಧದ ಸಭಾಂಗಣದಲ್ಲಿ ಹಾಕುವಂತೆ ಪ್ರತಿಭಟನೆ ಮಾಡಲಿದ್ದಾರೆ. ಸುವರ್ಣ ಸೌಧದ ಮೆಟ್ಟಿಲ ಮೇಲೆ ಫೋಟೊ ಹಿಡಿದು ಪ್ರತಿಭಟನೆ ಮಾಡುವುದಕ್ಕೆ ಪ್ರತಿಭಟನೆ ಸೀಮಿತವಾಗಲಿದೆ!

ಹಾಗಿದ್ದರೆ ಈ ಮೌನ ಯಾಕೆ? ಇದರಲ್ಲಿ ಸೋನಿಯಾ ಗಾಂಧಿ ರೋಲ್‌ ಏನು?

ಕಾಂಗ್ರೆಸಿಗರು ಈ ತಂತ್ರ ಅನುಸರಿಸಲು ಕಾರಣವಾಗಿದ್ದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅದೊಂದು ನಡೆ ಮತ್ತು ಅಭಿಪ್ರಾಯ.
ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂಸತ್‌ ಭವನದಲ್ಲಿ ವೀರ ಸಾವರ್ಕರ್‌ ಫೋಟೊವನ್ನು ಅನಾವರಣ ಮಾಡಲಾಗಿತ್ತು. ಅ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಎಲ್ಲ ವಿಪಕ್ಷ ನಾಯಕರು ಮತ್ತು ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಾಗಿತ್ತು. ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರೇ ಅನಾವರಣ ಮಾಡಿದ್ದರು.

ಆ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಹೋಗಿರಲಿಲ್ಲ. ಬದಲಾಗಿ ಒಂದು ಶುಭಾಶಯ ಪತ್ರ ಕಳುಹಿಸಿದ್ದರು. ಅದರಲ್ಲಿ, ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಸಾವರ್ಕರ್‌ ಭಾವಚಿತ್ರ ಅನಾವರಣದ ಕ್ರಮ ಸಂಸತ್‌ ಭವನದ ಘನತೆಯನ್ನು ಹೆಚ್ಚಿಸಿದೆ ಎಂದು ಅದರಲ್ಲಿ ಬರೆದಿದ್ದರು. ಅಂದು ತಮ್ಮ ನಾಯಕಿಯೇ ಸಾವರ್ಕರ್‌ ಫೋಟೊ ಹಾಕಿದ್ದನ್ನು ಸ್ವಾಗತಿಸಿದ್ದರಿಂದ ಈಗ ವಿರೋಧಿಸಲಾಗದೆ ಮೌನವಾಗಬೇಕಾಗಿದೆ.

ಇದನ್ನೂ ಓದಿ | ಬೆಳಗಾವಿ ಸದನದಲ್ಲಿ ಸಾವರ್ಕರ್ ಫೋಟೋ | ಕಾಂಗ್ರೆಸ್‌ ಬಳಿ ಏನಿದೆ ಪ್ರತ್ಯಸ್ತ್ರ?

Exit mobile version