ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ (ಎಸ್‌ಸಿ/ಎಸ್‌ಟಿ) ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾದೀನ ಸೇವೆಗಳಲ್ಲಿನ ನೇಮಕಾತಿ (ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ-೨೦೨೨ ಅನ್ನು ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ (ಬೆಳಗಾವಿ ಅಧಿವೇಶನ) ಮಂಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕವನ್ನು ಮಂಡಿಸಿದರು. ಎಸ್‌ಸಿ ವರ್ಗಕ್ಕೆ ಪ್ರಸ್ತುತ ಶೇ.೧೫ ಮೀಸಲಾತಿ ಇದ್ದು, ಅದನ್ನು ಶೇ.೧೭ಕ್ಕೆ ಮತ್ತು ಎಸ್‌ಟಿ ವರ್ಗದ ಮೀಸಲಾತಿ ಶೇ.೩ ಇದ್ದು, ಅದನ್ನು ಶೇ.೭ಕ್ಕೆ ಹೆಚ್ಚಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಎಸ್‌ಸಿ-ಎಸ್‌ಟಿ ಮೀಸಲಾತಿ ಸಾಗಿ ಬಂದ ದಾರಿ
ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸರ್ಕಾರವು ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಿತು. ಇದೀಗ ಸದನದಲ್ಲಿ ವಿಧೇಯಕ ಮಂಡಿಸುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳ ಅನುಷ್ಠಾನಕ್ಕೆ ಮುಂದಾಗಿದೆ.
ಸಂವಿಧಾನಬದ್ಧವಾಗಿ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಪ್ರಾತಿನಿಧ್ಯ ಇಲ್ಲ ಎಂದು ಎಸ್‌ಸಿ/ಎಸ್‌ಟಿ ಮುಖಂಡರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಅಲ್ಲದೇ, ನಾಯಕ ವಿದ್ಯಾರ್ಥಿ ಸಂಘವು ಹೈಕೋರ್ಟ್ ಮೊರೆಹೋಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಕಾರಕ್ಕೆ ಈಬಗ್ಗೆ ಗಮನಹರಿಸುವಂತೆ ನಿರ್ದೇಶನ ನೀಡಿತು. ಇದರ ಆಧಾರ ಮೇಲೆ ಸರ್ಕಾರವು ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.
ಆಯೋಗವು ಸಂಪೂರ್ಣವಾಗಿ ಅಧ್ಯಯನ ನಡೆಸಿ ವರದಿಯನ್ನು ನೀಡಿತ್ತು. ಆಯೋಗದ ವರದಿಯು ಈಗಲೂ ಮುಖ್ಯವಾಹಿನಿಯಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಹಲವು ಜಾತಿಗಳು ಹೊರಗಿವೆ. ಅಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿದೆ ಎಂದು ಹೇಳಿತ್ತು. ಅಲ್ಲದೇ, ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಶೈಕ್ಷಣಿಕ ಸಂಸ್ಥೆ ಮತ್ತು ಸರ್ಕಾರಿ ಉದಯೋಗದಲ್ಲಿ ಪ್ರಾತಿನಿಧ್ಯ ಸಾಕಷ್ಟು ಇಲ್ಲ. ಈ ಹಿಂದುಳಿದಿರುವಿಕೆಯಿಂದ ಹೊರಬರಲು ತೀವ್ರ ಕಷ್ಟಕರವಾಗಿದೆ. ಹೀಗಾಗಿ ಎಸ್‌ಸಿಗೆ ಶೇ.೧೭ರಷ್ಟು ಮತ್ತು ಎಸ್‌ಟಿಗೆ ಶೇ.೭ರಷ್ಟು ಮೀಸಲಾತಿ ನೀಡುವುದು ಸೂಕ್ತ ಎಂದು ವರದಿ ಹೇಳಿತ್ತು.
ನ್ಯಾ. ನಾಗಮೋಹನದಾಸ್ ಆಯೋಗದ ವರದಿ ಅನುಷ್ಠಾನವನ್ನು ಅವಲೋಕಿಸಲು ಸರ್ಕಾರವು ನ್ಯಾ.ಸುಭಾಷ್ ಬಿ ಅಡಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ನೇಮಕ ಮಾಡಿತು. ಆ ಸಮಿತಿಯು ಸಹ ಮೀಸಲಾತಿ ಹೆಚ್ಚಳಕ್ಕೆ ಸಂಬಂದಿಸಿದಂತೆ ವರದಿ ನೀಡಿದ್ದರಿಂದ ಸರ್ಕಾರವು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಂದೇನು?
ಈಗಾಗಲೇ ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.೫೦ಕ್ಕಿಂತ ಹೆಚ್ಚಿರುವುದರಿಂದ ರಾಜ್ಯದಲ್ಲಿಯೂ ಶೆಡ್ಯೂಲ್ ೯ಕ್ಕೆ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರವು ನಿರ್ಧರಿಸಿದೆ. ಮಂಡನೆಯಾದ ವಿಧೇಯಕದ ಬಗ್ಗೆ ಚರ್ಚೆ ನಡೆದು ಉಭಯ ಸದನಗಳಲ್ಲಿ ಅಂಗೀಕಾರವನ್ನು ಅದು ಪಡೆಯಬೇಕಾಗಿದೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ 4 ವಿಧೇಯಕಗಳ ಮಂಡನೆ; ಆರಗ ಜ್ಞಾನೇಂದ್ರ ಮಂಡಿಸಿದ ವಿಧೇಯಕಕ್ಕೆ ತಡೆ