Site icon Vistara News

Alcohol Effect : ಫುಲ್ ಟೈಟ್‌! ಕುಡಿತದ ಅಮಲಿನಲ್ಲಿ ಕೈಯನ್ನೇ ಬ್ಲೇಡ್‌ನಿಂದ ಕತ್ತರಿಸಿಕೊಂಡ ಯುವಕ ಸಾವು

Alcohol effect

ಚಿಕ್ಕೋಡಿ: ಕುಡಿತದ ಅಮಲಿನಲ್ಲಿ (Alcohol Effect) ಕಂಡ ಕಂಡವರ ಮೇಲೆ ಹಲ್ಲೆ ಮಾಡುವವರನ್ನು ನೋಡಿದ್ದೇವೆ, ಕೊಲೆ ಮಾಡುವವರನ್ನು ನೋಡಿದ್ದೇವೆ. ಕುಡಿದ ಮೇಲೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ತಿಳಿಯದೆ ಈ ರೀತಿ ಮಾಡುತ್ತಾರೆ ಅಂತೇವೆ. ಆದರೆ, ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, ತನ್ನನ್ನೇ ತಾನು ಬ್ಲೇಡಿನಿಂದ (Man injures hand with blade) ಕೊಯ್ದುಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ನಿವಾಸಿಯಾಗಿರುವ ಪರಶುರಾಮ ತೇಲಸಂಗ (32) ಎಂಬಾತನೇ ಕುಡಿತದ ಅಮಲಿನಲ್ಲಿ ಬ್ಲೇಡಿನಿಂದ ಕೊಯ್ದುಕೊಂಡವನು. ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅತಿಯಾದ ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾನೆ.

ಪರಶುರಾಮ ತೇಲಸಂಗನಿಗೆ ಕುಡಿತದ ಹುಚ್ಚು ಜೋರಾಗಿತ್ತು. ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದ. ಅವರಿವರ ಜತೆ ಜಗಳ ಮಾಡುತ್ತಿದ್ದ. ಈ ನಡುವೆ ಕುಡಿದ ಮತ್ತಿನಲ್ಲೇ ಆತ ಭಾನುವಾರ ರಾತ್ರಿ ದೇವಸ್ಥಾನಕ್ಕೂ ಹೋಗಿದ್ದ!

ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಚೆನ್ನಾಗಿ ಕುಡಿದುಕೊಂಡು ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದ. ಅಲ್ಲಿ ಆತನ ಬ್ಲೆಡ್‌ನಿಂದ ಕೈ ಕೊರೆದುಕೊಂಡಿದ್ದ. ಯಾರಿಗೋ ಸವಾಲು ಹಾಕಿ ಆತ ಈ ರೀತಿ ಬ್ಲೇಡ್‌ನಿಂದ ಕೊಯ್ದುಕೊಂಡಿದ್ದ ಎಂದು ಹೇಳಲಾಗಿದೆ. ಕೊಯ್ದುಕೊಂಡಾಗ ರಕ್ತ ಛಿಲ್ಲನೆ ಚಿಮ್ಮಿದೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ.

ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಡಿತ ಮತ್ತು ಮಾದಕ ವಸ್ತುಗಳ ಮತ್ತಿನಲ್ಲಿ ಕೆಲವರಿಗೆ ಬ್ಲೇಡಿನಿಂದ ಕೊಯ್ದುಕೊಂಡರೂ ನೋವಿನ ಅರಿವೇ ಆಗುವುದಿಲ್ಲವಂತೆ. ಹಾಗಂತ ರಕ್ತಸ್ರಾವ ಶುರುವಾದರೆ ನಿಲ್ಲುತ್ತದಾ? ನಿಲ್ಲುವುದಿಲ್ಲ. ಹೀಗಾಗಿ ಆತ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: Poisoning: ತಾಯಿ ಮಾಡಿದ ತಿಂಡಿಗೆ ವಿಷ ಬೆರೆಸಿ ತಂದೆ- ತಾಯಿಯನ್ನು ಕೊಂದ ಮಗ!

ಪೆರೋಲ್ ರಜೆ ಮೇಲೆ ಹೋಗಿದ್ದ ಕೈದಿ ನಾಪತ್ತೆ

ವಿಜಯಪುರ: ನಗರದ ದರ್ಗಾ ಜೈಲಿನಿಂದ ಪರೋಲ್‌ ಮೇಲೆ ಹೋಗಿದ್ದ ವ್ಯಕ್ತಿಯೊಬ್ಬ ಮರಳಿ ಜೈಲಿಗೆ ಬಾರದೆ ನಾಪತ್ತೆಯಾಗಿದ್ದಾನೆ. ಈಗ ಪೊಲೀಸರು ಆತನಿಗೆ ಪೆರೋಲ್‌ ಜಾಮೀನು ನೀಡಿದ ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ ಕಿರಣಕುಮಾರ ಹಿರೇಮಠ ನಾಪತ್ತೆಯಾಗಿರುವ ಕೈದಿ. ಕೈದಿ ಕಿರಣಕುಮಾರ ಹಿರೇಮಠ ಪೆರೋಲ್ ರಜೆಯ ಮೇಲೆ ಮನೆಗೆ ಹೋಗಿದ್ದ. ಆದರೆ ರಜೆಯ ಬಳಿಕ ಜೈಲಿಗೆ ಬಂದಿಲ್ಲ. ಅದಕ್ಕಾಗಿ ಜಾಮೀನು ನೀಡಿರುವ ಇಬ್ಬರ ವಿರುದ್ಧ ಕೇಸ್ ದಾಖಲು ಮುಂದಾಗಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version