ಬೆಳಗಾವಿ: ಇಲ್ಲಿನ ಖಾನಾಪುರ ಪಟ್ಟಣದ ತೋಪಿನಕಟ್ಟಿ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಕೈ ಕೈ ಮಿಲಾಯಿಸಿದ್ದಾರೆ. ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ (Assault Case) ನಡೆದಿದೆ ಎನ್ನಲಾಗಿದೆ. ಗಲಾಟೆ ಮಧ್ಯೆ ಬಂದ ಸ್ಥಳೀಯರು ಯುವಕರನ್ನು ಮನವೊಲಿಸಿ ಕಳುಹಿಸಿದ್ದಾರೆ. ಆದರೆ ಸಂಜೆ ಆಗುತ್ತಿದ್ದಂತೆ ಒಂದು ಗುಂಪಿನ ಯುವಕ ಹೋಗಿ ಮತ್ತೊಂದು ಗುಂಪಿನವರೊಂದಿಗೆ ಗಲಾಟೆ ಮಾಡಿದ್ದಾನೆ.
ಶಾಂತಿ ಸಭೆ ಕರೆದ ಶಾಸಕರು
ಇನ್ನು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ವಿಠ್ಠಲ ಹಲಗೇಕರ ಶಾಂತಿ ಸಭೆಗೆ ಕರೆದಿದ್ದರು. ಆದರೆ ಸಭೆಯ ಆರಂಭಕ್ಕೂ ಮುನ್ನವೇ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದರು. ಇದರಿಂದ ಮತ್ತೆ ಪರಿಸ್ಥಿತಿ ಹದಗೆಟ್ಟಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಖಾನಾಪುರ ಪೊಲೀಸರು ಹರಸಾಹಸ ಪಡೆಬೇಕಾಯಿತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಎರಡು ಪೊಲೀಸ್ ಡಿಆರ್‌ವಾಹನಗಳ ನಿಯೋಜನೆ ಮಾಡಲಾಗಿದ್ದು, ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜೆಡಿ ಶಶಿಧರ ಬಬಲಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Murder Case : ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಧೂರ್ತ ಪತಿ
ಹಲ್ಲೆ ಯತ್ನ ಪ್ರಕರಣ ದಾಖಲು
ಖಾನಾಪುರದ ತೋಪಿನಕಟ್ಟಿಯಲ್ಲಿ ಗಲಾಟೆ ವಿಚಾರವಾಗಿ ಬೆಳಗಾವಿ ಎಸ್‌ಪಿ ಎಂ ಡಾ. ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ. ನಾಲ್ವರ ನಡುವೆ ರಸ್ತೆ ಕಾರಣಕ್ಕೆ ವಾಗ್ವಾದ ಆಗಿತ್ತು. ಈ ಸಂಬಂಧ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುವಾರ ಸಂಜೆ ಒಂದು ಕೋಮಿನವರು ಮತ್ತೊಂದು ಕೋಮಿನವರ ಜಾಗಕ್ಕೆ ಹೋಗಿದ್ದರು. ಹೀಗಾಗಿ ಅಲ್ಲಿ ದ್ವೇಷಮಯ ವಾತಾವಾರಣ ನಿರ್ಮಾಣ ಆಗಿತ್ತು.
ಬಳಿಕ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ಯಾರಿಗಾದರೂ ಹಲ್ಲೆಯಾಗಿದ್ದರೆ ದೂರು ನೀಡಿ ಎಂದು ಪೊಲೀಸರು ಹೇಳಿದ್ದರು. ಆದರೆ ಬೆಳಗ್ಗೆ ಬಂದು ದೂರು ನೀಡುವುದಾಗಿ ಹೇಳಿದ್ದರು. ಹಿಂದಿನ ದಿನದ ವಿಡಿಯೋ ಹರಿಬಿಟ್ಟಿದ್ದರಿಂದ ಬೇರೆ ಬೇರೆ ಊರಿನ ಜನರು ತೋಪಿನಕಟ್ಟಿಗೆ ಬಂದಿದ್ದರು. ಹೊರಗಡೆ ಊರಿನ ಜನ ಬಂದ ತಕ್ಷಣ ಕಿಡಿಗೇಡಿಗಳು ಮೂರು ಕಲ್ಲುಗಳನ್ನು ಎಸೆದಿದ್ದರು. ತಕ್ಷಣ ಪೊಲೀಸರು ಧಾವಿಸಿ ಲಾಠಿ ಚಾರ್ಜ್ ಮಾಡಲು ತಯಾರಿ ಮಾಡಿಕೊಂಡಿದ್ದರು.
ಅಲ್ಲಿಂದ ಲಾಠಿ ಚಾರ್ಜ್ ಮಾಡುವ ಮೊದಲೇ ಎಲ್ಲರೂ ಓಡಿ ಹೋಗಿದ್ದರು. ನಂತರ ಕೆಲವರನ್ನು ವಿಚಾರಣೆ ನಡೆಸಿದಾಗ ದಲಿತರ ಮೇಲೆ ಹಲ್ಲೆ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಹಲ್ಲೆ ಯತ್ನ ಪ್ರಕರಣವನ್ನು ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದ್ದೇವೆ. ಗ್ರಾಮದಲ್ಲಿ ಶಾಂತ ರೀತಿಯ ವಾತಾವರಣ ಇದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗ ಈ ಲಿಂಕ್ ಕ್ಲಿಕ್ ಮಾಡಿ