Site icon Vistara News

Assault Case : ಮಾರಾಮಾರಿಯಲ್ಲಿ ತಂದೆ ಕಿವಿ ಕಟ್‌; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್‌ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ

Assault Case

ಚಿಕ್ಕೋಡಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ (Assault Case) ನಡೆದಿತ್ತು. ಘಟನೆಯಲ್ಲಿ ಗಾಯಗೊಂಡ ತಂದೆಯನ್ನು ಕಾಪಾಡಲು ಸದಲಗಾ ಸರ್ಕಾರಿ ಆಸ್ಪತ್ರೆಯಿಂದ ಚಿಕ್ಕೋಡಿವರೆಗೂ ಮಗನೇ ಸರ್ಕಾರಿ ಆಂಬ್ಯುಲೆನ್ಸ್‌ ಓಡಿಸಿಕೊಂಡು ಬಂದಿದ್ದಾನೆ.

ಸದಲಗಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಚಾಲಕ ಇಲ್ಲದ ಹಿನ್ನೆಲೆಯಲ್ಲಿ ಯುವಕನೇ ಆಂಬ್ಯುಲೆನ್ಸ್‌ ಚಲಾಯಿಸಿಕೊಂಡು ಬಂದು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದು ಹಾಳಾದ ಆರೋಗ್ಯ ಇಲಾಖೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜನವಾಡ ಗ್ರಾಮದ ಸಿದ್ದು ಪೂಜಾರಿಗೆ ಆತನ ಪತ್ನಿ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸಿದ್ದು ಪೂಜಾರಿ ಕಿವಿ ಕಟ್ ಆಗಿತ್ತು, ಜತೆಗೆ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ತಂದೆಯನ್ನು ಕೂಡಲೇ ಬೈಕ್ ಮೇಲೆ ಕೂರಿಸಿಕೊಂಡ ಮಗ ಮಾಳು ಪೂಜಾರಿ ಸದಲಗಾ ಸರ್ಕಾರಿ ಕರೆದುಕೊಂಡು ಹೋಗಿದ್ದ.

ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಆಂಬ್ಯುಲೆನ್ಸ್‌ ಕೊಡಿ ಎಂದಿದ್ದಕ್ಕೆ ಆಸ್ಪತ್ರೆ ವೈದ್ಯರು ಚಾಲಕ ಇಲ್ಲ, ನೀವೇ ಆಂಬ್ಯುಲೆನ್ಸ್‌ ತೆದುಕೊಂಡು ಹೋಗಿ ಎಂದಿದ್ದಾರೆ. ಹೀಗಾಗಿ ಮಾಳು ಪೂಜಾರಿ ಗಾಯಾಳು ತಂದೆಯನ್ನು ಸರ್ಕಾರಿ ಆಂಬ್ಯುಲೆನ್ಸ್‌ ವಾಹನವನ್ನು ತಾನೇ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಇದನ್ನೂ ಓದಿ: Chikkamagaluru Tragedy : ಬಾಯ್ಲರ್‌ ಶಾಖಕ್ಕೆ ಸುಟ್ಟು ಕರಕಲಾದ ಯುವಕ; ಸಿಲ್ವರ್ ಮರವೇರಿದಾಗ ಕರೆಂಟ್‌ ಶಾಕ್‌ಗೆ ಕಾರ್ಮಿಕ ಸಾವು

ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಸ್ಥಳ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ (Chikkalluru Siddappaji Temple) ಪೂಜೆ ವಿಚಾರಕ್ಕೆ ತ್ರಿಶೂಲಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಅರ್ಚಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಲೂರು ದೇವಸ್ಥಾನದ ಅರ್ಚಕ ಶಂಕರಪ್ಪ (65), ಶಿವಕುಮಾರಸ್ವಾಮಿ (40) ಹಾಗೂ ನಂಜುಂಡಸ್ವಾಮಿ (32) ಗಂಭೀರ ಗಾಯಗೊಂಡವರು.

ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ, ಸಿದ್ದಪ್ಪಾಜಿ ದೇವಸ್ಥಾನದ ಬೆತ್ತ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

ಸದ್ಯ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version