Site icon Vistara News

ಬೆಳಗಾವಿ: ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ

shivaranjan

ಬೆಳಗಾವಿ: ಹಿರಿಯ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ ನಡೆದಿದೆ. ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.

ಅದೃಷ್ಟವಶಾತ್ ಒಂದೇ ಒಂದು ಗುಂಡು ಕೂಡ ಶಿವರಂಜನ್ ಅವರಿಗೆ ತಗುಲಿಲ್ಲ. ಬೈಲಹೊಂಗಲದ ಹಳೆಯ ಹಣಮಂತ ದೇವರ ದೇವಸ್ಥಾನ ಬಳಿ ಇರುವ ಶಿವರಂಜನ್ ಬೋಳಣ್ಣವರ್ ಮನೆ ಎದುರೇ ಈ ದಾಳಿ ನಡೆಸಲಾಗಿದೆ.

ಶಿವರಂಜನ್ ಸೋದರ ಸಂಬಂಧಿಯೇ ಈ ಗುಂಡಿನ ದಾಳಿ ನಡೆಸಿರಬಹುದೆಂದು ಅನುಮಾನಿಸಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಸಂಜೀವ ಪಾಟೀಲ್ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ಕೂಡ ರಚಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವರಂಜನ್‌ ʼಅಮೃತಸಿಂಧುʼ, ʼರಾಜಾರಾಣಿʼ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಾಯಕ ನಟರಾಗಿದ್ದರು. ಅಮೃತಸಿಂಧು ಚಿತ್ರದ ಮೂಲಕ ಅವರು ದೊಡ್ಡ ಹೆಸರು ಮಾಡಿದ್ದರು. ನಟಿ ಶ್ರುತಿ ಈ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದರು. 20 ವರ್ಷಗಳ ಹಿಂದೆ ಈ ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಾಣ ಮಾಡಿದ್ದರು. ಮುಖ್ಯವಾಗಿ ಕನಸೆಂಬ ಕುದುರೆಯನ್ನೇರಿ, ಬಿಸಿ ರಕ್ತ, ವೀರಭದ್ರ, ಆಟ ಹುಡುಗಾಟ ಚಿತ್ರಗಳಲ್ಲಿ ಅವರು ನಟಿಸಿ, ಗಮನ ಸೆಳೆದಿದ್ದರು. ಈಗ ಚಿತ್ರ ರಂಗದಿಂದ ದೂರವಾಗಿದ್ದ ಅವರು, ಕೆಲ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ| ಬಿ.ಕಾಂ. ಓದಿ ಕಾರು ಕಳ್ಳತನಕ್ಕೆ ಇಳಿದ: ಟೆಕ್ನಾಲಜಿಯೇ ಈತನ ಬಂಡವಾಳ

Exit mobile version