ಬೆಳಗಾವಿ: ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ರೈತರು (Belgavi News) ಬೆಳಗಾವಿ ಎಸಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಹೊತ್ತೊಯ್ದ ಘಟನೆ ನಡೆದಿದೆ. ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯಲ್ಲಿ ಘಟನೆ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗಾಗಿ ರೈತರು ಕಳೆದ 2008ರಲ್ಲಿ 270 ಎಕರೆ ಜಮೀನು ಕೊಟ್ಟಿದ್ದರು. ಪ್ರತಿ ಎಕರೆಗೆ ಸರ್ಕಾರದಿಂದ ಕೇವಲ 2 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿತ್ತು. ಹೆಚ್ಚಿನ ಪರಿಹಾರ ಕೋರಿ 2011ರಲ್ಲಿ ರೈತರು ಕೋರ್ಟ್ ಮೊರೆಹೋಗಿದ್ದರು. ಬೆಳಗಾವಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ರೈತರು ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ ₹40 ಸಾವಿರದಂತೆ ಪರಿಹಾರ ನೀಡುವಂತೆ 2018ರಲ್ಲಿಯೇ ಆದೇಶ ಹೊರಡಿಸಿತ್ತು.
ಇತ್ತ ಸಕಾಲಕ್ಕೆ ಪರಿಹಾರ ಕೊಡದಿದ್ದಾಗ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ಮತ್ತೊಮ್ಮೆ ಕೋರ್ಟ್ ಆದೇಶ ಹೊರಡಿಸಿತ್ತು. ಆಗಲೂ ಪರಿಹಾರ ನೀಡದಿದ್ದರಿಂದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು.
ಜಮೀನು ಕೊಟ್ಟ ಇನ್ನೂ 20 ರೈತರಿಗೆ 8 ಕೋಟಿ ಪರಿಹಾರ ಬಾಕಿ ಇದೆ. ಪರಿಹಾರ ಸಿಗದ ಹಿನ್ನೆಲೆ ನ್ಯಾಯವಾದಿಗಳ ಸಮ್ಮುಖದಲ್ಲೇ ಎಸಿ ಕಚೇರಿಯಲ್ಲಿನ ವಸ್ತುಗಳನ್ನು ರೈತರು ಹೊತ್ತೊಯ್ದರು. ಕಂಪ್ಯೂಟರ್, ಕುರ್ಚಿಗಳು, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ಇದನ್ನೂ ಓದಿ: Road Accident : ಬಂಗಾರಪೇಟೆಯಲ್ಲಿ ವ್ಹೀಲಿಂಗ್ ಹಾವಳಿಗೆ ಅರ್ಚಕ ಬಲಿ; ರಸ್ತೆ ದಾಟುತ್ತಿದ್ದವನಿಗೆ ಕಾರು ಡಿಕ್ಕಿ
ಶಿರಡಿ ಸಾಯಿ 3ನೇ ಅವತಾರ ಬಾಬ ಹೆಸರಿನಲ್ಲಿ ವಂಚನೆ
ಬಾಬಾ ಭಕ್ತೆಯಾಗಿರುವ ಅಮೇರಿಕಾದ ವಿಜ್ಞಾನಿಗೆ ಬಾಬಾ ಆಪ್ತರು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಸಾಯಿಬಾಬರ ಮೂರನೇ ಅವತಾರ ಎಂದೇ ಬಿಂಬಿತರಾಗಿರುವ ಪ್ರೇಮಸಾಯಿ ಅವರ ಹೆಸರಿನಲ್ಲಿ ವಂಚನೆ ನಡೆದಿದೆ. ವಂಚನೆ ದೂರು ದಾಖಲಿಸಿದಕ್ಕೆ ವಿಜ್ಞಾನಿ ಕಂ ಡಾಕ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ.
ಬಾಬಾ ಆಪ್ತರು ಪ್ರೇಮಸಾಯಿ ಉಚಿತ ವೈದ್ಯ ಚಿಕಿತ್ಸಾಲಯದಲ್ಲಿ ಉಚಿತ ಚಿಕಿತ್ಸೆ ಕಾರ್ಯಕ್ರಮಕ್ಕೆ ಫಂಡಿಂಗ್ ಮಾಡಲು ಕೇಳಿದ್ದರು. ವಿಜ್ಞಾನಿ ಡಾ. ಸಾಯಿಕುಮಾರಿ ಎಂಬುವವರು ಬಳಿ ಸಿದ್ದೇಗೌಡ , ಸಿಂಧು ಹಾಗು ಇನ್ನಿತರರು ದೇಣಿಗೆ ಕೇಳಿದ್ದರು. ಈ ಕಾರ್ಯಕ್ರಮದಿಂದ ಪ್ರಭಾವಿತಳಾಗಿದ್ದ ಸಾಯಿಕುಮಾರಿ ಸುಮಾರು 1,99,000 ಸಾವಿರ ರೂ. ದೇಣಿಗೆ ನೀಡಿದ್ದರು.
ಈ ನಡುವೆ ಪ್ರೇಮಸಾಯಿ ಬಾಬ ಚನ್ನಪಟ್ಟಣಕ್ಕೆ ಭೇಟಿ ನೀಡಿದಾಗ ವಿಜ್ಞಾನಿ ಸಾಯಿಕುಮಾರಿ ಭೇಟಿಯಾಗಿದ್ದರು. ಈ ವೇಳೆ ದೇಣಿಗೆ ನೀಡಿರುವುದಾಗಿ ಹೇಳಿದ್ದರು. ಆದರೆ ಬಾಬಾಗೆ ಇದರ ಬಗ್ಗೆ ವಿಚಾರವೂ ಗೊತ್ತಿಲ್ಲ. ಬಾಬಾ ಅವರಿಗೆ ಗೊತ್ತಾಗದ ರೀತಿಯಲ್ಲಿ ಅವರ ಹೆಸರಿಲ್ಲಿ ದೇಣಿಗೆ ಸಂಗ್ರಹಿಸಿದ್ದು ತಿಳಿದಿದೆ. ಈ ಬಗ್ಗೆ ಚನ್ನಪಟ್ಟಣದಲ್ಲಿ ಪ್ರೇಮಸಾಯಿ ದೂರು ದಾಖಲಿಸಿದ್ದರು.
ಇದೇ ವಿಚಾರವಾಗಿ ಕೆಂಗೇರಿಯ ಮನೆಗೆ ಬಂದ ಬಾಬಾ ಆಪ್ತರು ವಿಜ್ಞಾನಿ ಪ್ರೇಮಾಸಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ದೂರು ವಾಪಾಸ್ ಪಡೆಯುವಂತೆ ಬೆದರಿಸಿದ್ದಾರೆ. ಸದ್ಯ ವಂಚನೆ ಸಂಬಂಧ ಚನ್ನಪಟ್ಟಣದಲ್ಲಿ ಹಾಗೂ ಹಲ್ಲೆ ಸಂಬಂಧ ಕೆಂಗೇರಿಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ