Site icon Vistara News

ನಾವು 101% ಬಿಜೆಪಿಯಲ್ಲೇ ಇರುತ್ತೇವೆ ಎಂದ ಶಾಸಕ ಮಹೇಶ್‌ ಕುಮಟಳ್ಳಿ: ಬಗೆಹರಿದ ಬಿಕ್ಕಟ್ಟು?

bjp mla mahesh kumathalli says he and raesh jarakiholi will remain in bjp

ಬೆಂಗಳೂರು: ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ, ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಟಿಕೆಟ್‌ ಕೇಳುವುದೂ ಸೇರಿ ಅನೇಕ ಕಾರಣಗಳಿಂದ ಉಂಟಾಗಿದ್ದ ಗೊಂದಲವನ್ನು ಬಿಜೆಪಿ ಬಗೆಹರಿಸಿಕೊಂಡಂತಿದೆ. ತಾವು ಯಾವುದೇ ಕಾರಣಕ್ಕೆ ಬಿಜೆಪಿ ಬಿಟ್ಟು ಹೋಗುವುದಿಲ್ಲ, 101% ಬಿಜೆಪಿಯಲ್ಲೇ ಇರುತ್ತೇವೆ ಎಂದು ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಟಳ್ಳಿ, ಅಥಣಿ ಕ್ಷೇತ್ರಕ್ಕೆ ಒಂದು ಪರಿಷತ್ ಸ್ಥಾನ ಹಾಗೂ ಎಂಎಲ್ಎ ಟಿಕೆಟ್ ಅಂತೂ ಸಿಗುತ್ತದೆ. ಲಕ್ಷ್ಮಣ ಸವದಿಯವರು ಪಕ್ಷಕ್ಕಾಗಿ ದುಡಿದಿದ್ದಾರೆ, ಅವರು ಕೂಡ ಪಕ್ಷದಲ್ಲಿ ಹಿರಿಯರಿದ್ದಾರೆ. ಹೀಗಾಗಿ ಮುಂದೆಯೂ ಅಥಣಿಗೆ ಒಂದು ಎಂಎಲ್‌ಸಿ, ಒಂದು ಎಂಎಲ್ಎ ಸ್ಥಾನ ಸಿಗುತ್ತದೆ.

ನಾನು ಎಲ್ಲಿಯೂ ಹೋಗುವುದಿಲ್ಲ. ಬಿಜೆಪಿಯಲ್ಲಿ ಮುಂದುವರಿಯುತ್ತೇನೆ. 2023ಕ್ಕೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ ಜತೆಯಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕುಮಟಳ್ಳಿ, ನಾವು 101% ಬಿಜೆಪಿಯಲ್ಲೇ ಇರ್ತೇವೆ, ಬಿಜೆಪಿ ಬಿಡಲ್ಲ. ಸ್ಥಾನಮಾನ ಸಿಗುವುದು ಬಿಡುವುದು ಬೇರೆ ವಿಚಾರ. ನಾವಿಲ್ಲಿಗೆ ಸ್ಥಾನಮಾನ ಅಪೇಕ್ಷಿಸಿ ಬರಲಿಲ್ಲ. ಸಾಂದರ್ಭಿಕ ರಾಜಕೀಯದ ಪರಿಸ್ಥಿತಿಯಿಂದ ಬಿಜೆಪಿಗೆ ಬಂದಿದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಬಂದ ಮೇಲೆ ಪಕ್ಷದ ಕೆಲಸವನ್ನು ಮಾಡುತ್ತಿದ್ದೇವೆ. ಅಧಿಕಾರ ಬಯಸಿ ನಾವು ಬಿಜೆಪಿಗೆ ಬರಲಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಶಕ್ತಿ. ರಮೇಶ್ ಜಾರಕಿಹೊಳಿ ಅವರ ಮೇಲೆ ಬಿಜೆಪಿ ವರಿಷ್ಠರು ಅಪಾರ ವಿಶ್ವಾಸ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು 2023 ರಲ್ಲಿ ಬಿಜೆಪಿ ಪಕ್ಷವನ್ನು‌ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಡುತ್ತಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ, ಅದು ಸುಳ್ಳು ಎಂದರು.

ಜೆಡಿಎಸ್‌ನವರ ಜತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾರ ಜತೆಗೂ ಸಂಪರ್ಕದಲ್ಲಿ ಇಲ್ಲ. ಇದೇ 17, 18 ರಂದು ನನ್ನ ಮಗನ ಆರತಕ್ಷತೆ ಕಾರ್ಯಕ್ರಮ ಇದೆ. ನಮ್ಮ ಪಕ್ಷದವರನ್ನೂ ಆಹ್ವಾನ ಮಾಡುತ್ತೇನೆ, ಸಿದ್ದರಾಮಯ್ಯ, ಎಚ್‌ಡಿಕೆ ಅವರನ್ನೂ ಆಹ್ವಾಣಿಸುತ್ತೇನೆ ಎಂದರು.

ಇದನ್ನೂ ಓದಿ | Jarakiholi Brothers | ಮುಂದಿನ ಎಲೆಕ್ಷನ್‌ನಲ್ಲಿ ನಾನು, ರಮೇಶ್‌ ಜಾರಕಿಹೊಳಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇವೆ: ಬಾಲಚಂದ್ರ

Exit mobile version