Site icon Vistara News

power problem : ಬಿಜೆಪಿ ಕಾಲದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸದೆ ಇರುವುದೇ ಸಮಸ್ಯೆಗೆ ಕಾರಣ ಎಂದ ಡಿಕೆಶಿ

DK Shivakumar power generation

ಬೆಳಗಾವಿ: “ಹಿಂದಿನ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ (power Generation) ಹೆಚ್ಚಳ ಮಾಡಿಲ್ಲ. ಪ್ರಸ್ತುತ ಈ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್‌ನ ಬಳಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಬಿಜೆಪಿ ಅವರ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. 2013-18ರ ನಮ್ಮ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡದ ಕಾರಣ ಸಮಸ್ಯೆ (Power problem) ಉಂಟಾಗಿದೆʼ ಎಂದರು.

ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೇ ಕಾರ್ಯಪ್ರವೃತ್ತರಾಗಿ ಇಂಧನ ಸಚಿವರಾದ ಜಾರ್ಜ್ ಅವರೊಟ್ಟಿಗೆ ಪಾವಗಡ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆವು. ಈಗ ನೂತನ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಒಂದು ದಿನ ಮಳೆ ಬೀಳದೆ ಇದ್ದರೆ ಸರ್ಕಾರಕ್ಕೆ 1,000 ಕೋಟಿ ನಷ್ಟ ಉಂಟಾಗುತ್ತದೆ. ನಾವು ಈಗ ವಿದ್ಯುತ್ ಅನ್ನು ಪ್ರತಿ ಯೂನಿಟ್ ಗೆ 6- 7 ರೂಪಾಯಿಗೆ ಖರೀದಿ ಮಾಡಿ, ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. ಮಿಕ್ಕ ಹಣವನ್ನು ಸರ್ಕಾರ ತುಂಬಲಿದೆ. ಈ ಭಾಗದಲ್ಲಿ ಕೆಲವರು ಕಾಲುವೆಗೆ ಪಂಪ್‌ ಹಾಕಿ ನೀರು ಎತ್ತುತ್ತಿರುವ ಕಾರಣ ಕಾಲುವೆಯ ನೀರು ಕೊನೆಯ ಭಾಗದ ರೈತರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಅದಕ್ಕೆ ಅನೇಕ ರೈತರು 10- 15 ಕಿಮೀ ದೂರ ನೀರನ್ನು ಪಂಪ್ ಮಾಡುತ್ತಿದ್ದಾರೆ‌. ಆದ ಕಾರಣ ನೀರು ಬಳಕೆದಾರರ ಸಂಘಗಳ ಬಗ್ಗೆ ಸಭೆ ನಡೆಸಿ, ಅವುಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

“ಎತ್ತಿನಹೊಳೆಯಿಂದ ನೀರು ತರುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಎಲ್ಲಾ ಭಾಗಕ್ಕೂ ನೀರು ತಲುಪಬೇಕು ಎಂದರೆ ಮಧ್ಯದಲ್ಲಿ ಪಂಪ್ ಹಾಕಿ ನೀರು ಬಳಸುವುದನ್ನು ತಪ್ಪಿಸಬೇಕು. ಇದಕ್ಕೆ ಸೂಕ್ತ ಕಾನೂನು ತರಬೇಕುʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು

ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆಯಬೇಕು ಎಂದು ಸೂಚನೆ ನೀಡಿದ್ದು, ಈ ಕುರಿತು ಮೀನುಗಾರಿಕೆ ಸಚಿವರ ಬಳಿಯೂ ಚರ್ಚೆ ಮಾಡುತ್ತೇನೆ. ಪಂಪ್ ಮಾಡಿ ನೀರು ತುಂಬಿಸಲು ಸಾಕಷ್ಟು ವಿದ್ಯುತ್ ಖರ್ಚಾಗುತ್ತಿದ್ದು, ಅದರ ವೆಚ್ಚವನ್ನು ಈ ಮೂಲಕ ಭರಿಸಲು ನಿರ್ಧರಿಸಿದ್ದೇವೆ. ಬೆಳಗಾವಿ ಭಾಗದಲ್ಲಿ 1,200 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದ ರೈತರ ಅದೃಷ್ಟ. ಮಲಪ್ರಭಾ ಒಂದು ಬಿಟ್ಟು ಹೆಚ್ಚಿನ ಎಲ್ಲಾ ಕೆರೆ, ಜಲಾಶಯಗಳು ಭರ್ತಿಯಾಗಿವೆ. ಹಳೇ ಮೈಸೂರು ಭಾಗದಲ್ಲೇ ಸಮಸ್ಯೆ ಹೆಚ್ಚಾಗಿದ್ದು, ದೇವರೆ ಕೈ ಹಿಡಿಯಬೇಕು ಎಂದರು.

ಬೊಮ್ಮಸಂದ್ರದಿಂದ ಹೊಸೂರು ತನಕ ಮೆಟ್ರೋ ತಪ್ಪಲ್ಲ ಎಂದ ಡಿಕೆಶಿ

ಕನ್ನಡಿಗರ ವಿರುದ್ಧ ಇರುವ ತಮಿಳುನಾಡು ಸರ್ಕಾರ ಬೊಮ್ಮಸಂದ್ರದಿಂದ ಹೊಸೂರು ತನಕ ಮೆಟ್ರೋ ನಿರ್ಮಾಣಕ್ಕೆ ಟೆಂಡರ್ ಕರೆದಿರುವ ವಿಚಾರವಾಗಿ ಕೇಳಿದಾಗ “ಈ ಮೊದಲೇ ಅವರು ಬೇಡಿಕೆ ಇಟ್ಟಿದ್ದರು‌‌. ಎರಡೂ ರಾಜ್ಯಗಳ ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ, ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಾವೇನೂ ಟೆಂಡರ್ ಕರೆಯುತ್ತಿಲ್ಲ, ಸಾಧ್ಯತೆಯ ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಅಷ್ಟೇ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಶೇ. 50ರಷ್ಟು ಸಹಭಾಗಿತ್ವವಿದೆ. ಇದರಲ್ಲಿ ತಪ್ಪೇನಿದೆ?, ಮಹಾರಾಷ್ಟ್ರ ಮತ್ತು ಬೆಳಗಾವಿ ನಡುವೆ ಬಸ್ ಓಡಾಡಬಾರದು ಎಂದು ನಿಯಮ ಮಾಡಲು ಆಗುತ್ತದೆಯೇ? ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ರೈಲು ವ್ಯವಸ್ಥೆ ಇಲ್ಲವೇ?” ಎಂದು ಪ್ರಶ್ನಿಸಿದರು.

Exit mobile version