ಬೆಳಗಾವಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂಸದರಾದ ತಮ್ಮನ್ನು ಆಹ್ವಾನಿಸದೇ ಇರುವುದಕ್ಕೆ ಬಿಜೆಪಿ (BJP Politics) ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಎತ್ತಿದ ಆಕ್ಷೇಪಗಳಿಗೆ ಶಾಸಕ ರಮೇಶ್ ಜಾರಕಿಹೊಳಿ ನೇರ ತಿರುಗೇಟು ನೀಡಿದ್ದು, ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ.
ಮಾರ್ಚ್ 2ರಂದು ಟ್ವೀಟ್ ಮಾಡಿದ್ದ ಈರಣ್ಣ ಕಡಾಡಿ, “ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೇ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ? ಎಂಬ ಕನಿಷ್ಠ ಜ್ಞಾನವಿರಬೇಕು”.
“ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿಗಳು ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು ಆದರೆ ನಾನು ಹೋದಲೆಲ್ಲಾ ಪಕ್ಷ ಬದಲಾಯಿಸಿದಾಗ ನನ್ನ ಜೊತೆಗಿರುವ ನನ್ನ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳಾಗಿದ್ದರೂ ಕೂಡ ಅವರಿಗೆ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು ? ಎಂಬ ಕನಿಷ್ಠ ವಿವೇಚನೆ ನಮಗಿರಬೇಕು”.
“ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮನೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು” ಎಂದು ಮೂರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ: ಮುಖ್ಯಮಂತ್ರಿ ಬೊಮ್ಮಾಯಿ
ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮಾಡಿದ್ದು ಸರ್ಕಾರಿ ಕಾರ್ಯಕ್ರಮ ಅಲ್ಲ, ಅದು ಖಾಸಗಿ ಕಾರ್ಯಕ್ರಮ. ಘಟ್ಟಿ ಬಸವಣ್ಣ ಯೋಜನೆಗೆ ಅಡಿಗಲ್ಲು ಪೂಜೆ ಮಾಡಿದ್ದೆ. ನಾನು ಆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಪ್ರಿಂಟ್ ಹಾಕಿಸಿಲ್ಲ. ಮುಖ್ಯಮಂತ್ರಿಗಳ ಪರ್ಮಿಷನ್ ತೆಗೆದುಕೊಂಡು ನಾನು ಖಾಸಗಿಯಾಗಿ ಕಾರ್ಯಕ್ರಮ ಮಾಡಿದ್ದೇನೆ. ಒಬ್ಬ ರಾಜ್ಯಸಭಾ ಸದಸ್ಯನಾಗಿ ಈರಣ್ಣ ಕಡಾಡಿಯವರಿಗೆ ಅಷ್ಟೂ ಬುದ್ದಿ ಇಲ್ಲ ಅಂದ್ರೆ ನಾನು ಏನು ಹೇಳಲಿ? ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.