ಬೆಳಗಾವಿ: ಉಭಯ ರಾಜ್ಯಗಳ ಶಾಸಕರು, ಸಚಿವರ ನಡುವೆ ಮಾತಿನ ಚಕಮಕಿ ಹಾಗೂ ಉದ್ವಿಗ್ನ ಸನ್ನಿವೇಶಕ್ಕೆ ಕಾರಣವಾಗಿದ್ದ, ಮಹಾರಾಷ್ಟ್ರ ಸಚಿವರ ನಿಯೋಜಿತ ಬೇಟಿ ರದ್ದುಗೊಂಡಿದೆ. ಇದೇ ವೇಳೆಗೆ, ಕರ್ನಾಟಕ ರಕ್ಷಣಾ ವೇದಿಕೆ ಇಂದು ʻಕರವೇ ನಡಿಗೆ ಬೆಳಗಾವಿ ಕಡೆಗೆ’ ಹಮ್ಮಿಕೊಂಡಿದೆ.
ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಶಂಭುರಾಜ ದೇಸಾಯಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 3ರಂದು ಬೆಳಗಾವಿಗೆ ಭೇಟಿ ನೀಡಲು ನಾವು ನಿರ್ಧರಿಸಿದ್ದೆವು. ಆದರೆ ಕೆಲ ದಲಿತ ಸಂಘಟನೆಗಳು ಡಿ.6ರಂದು ಬೆಳಗಾವಿಗೆ ಬರುವಂತೆ ಆಹ್ವಾನ ನೀಡಿದ್ದರಿಂದ ಡಿ.6ರಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದೆವು. ಇಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನವಿದ್ದು, ಈ ದುಃಖದ ದಿನದಂದು ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಈ ನಿರ್ಣಯ ತೆಗೆದುಕೊಂಡಿದ್ದೇವೆ. ಮಹಾಪರಿನಿರ್ವಾಹಣ ದಿನದಂದು ಶ್ರದ್ಧಾಂಜಲಿ ಸಲ್ಲಿಕೆಗೆ ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದರೆ ಒಳ್ಳೆಯದಿತ್ತು. ಆದರೆ ನಮಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಭೇಟಿ ರದ್ದುಮಾಡಿದ್ದೇವೆ ಎಂದು ದೇಸಾಯಿ ಹೇಳಿದ್ದಾರೆ.
ಕರವೇ ನಡಿಗೆ ಬೆಳಗಾವಿ ಕಡೆಗೆ
ಎಂಇಎಸ್, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ರಕ್ಷಣಾ ವೇದಿಕೆ, ಇಂದು ʼಕರವೇ ನಡಿಗೆ ಬೆಳಗಾವಿ ಕಡೆಗೆʼ ಹಮ್ಮಿಕೊಂಡಿದೆ. ನಾಡದ್ರೋಹಿ ಎಂಇಎಸ್ ಹಾಗೂ ಮಹಾರಾಷ್ಟ್ರ ರಾಜಕಾರಣಿಗಳು ಕರ್ನಾಟಕ ಸರ್ಕಾರವನ್ನು ನಿಂದಿಸುತ್ತಿರುವುದನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ಷೇಪಿಸಿದ್ದಾರೆ. ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆಗೂ ಖಂಡನೆ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿಗೆ ಆಗಮಿಸುತ್ತಿರುವ ನಾರಾಯಣಗೌಡ ನೂರಾರು ಬೆಂಬಲಿಗರೊಂದಿಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಸಭೆ, ಬೆಳಗಾವಿಯ ಖಾಸಗಿ ಹೋಟೆಲ್‌ನಿಂದ ಚನ್ನಮ್ಮ ವೃತ್ತದವರೆಗೆ ರ್ಯಾಲಿ ನಡೆಸಲಿದ್ದಾರೆ.
ಇದನ್ನೂ ಓದಿ | Border dispute | ಕರ್ನಾಟಕದ ಎಚ್ಚರಿಕೆಗೆ ಮಣಿದ ಮಹಾರಾಷ್ಟ್ರ: ಸಚಿವರ ಬೆಳಗಾವಿ ಭೇಟಿ ರದ್ದು, ಫಡ್ನವಿಸ್ ಹೇಳಿದ್ದೇನು?