ಬೆಳಗಾವಿ: ಹಲವಾರು ಕಾರಣದಿಂದ ಹೆತ್ತವರಿಂದ ತಿರಸ್ಕಾರಕ್ಕೊಳಗಾದ ಹಸುಗೂಸುಗಳಿಗೆ ಪ್ರೀತ, ವಾತ್ಸಲ್ಯ ತೋರುವ ಕೇಂದ್ರ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರ. ಲಾಲನೆ, ಪಾಲನೆಯಲ್ಲಿ ತೊಡಗಿ ಅಭಿರಕ್ಷಣೆಯಲ್ಲಿ ಇದ್ದ ಮಗುವನ್ನು CARA ನಿಯಮಗಳಂತೆ ಆಯ್ಕೆಯಾದ ದಂಪತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ (child adoption) ಹಸ್ತಾಂತರಿಸಿದರು.
ಅನಾಥ ಮಕ್ಕಳಿಗೆ ರಕ್ಷಣೆ ಒದಗಿಸಿ, ಭವಿಷ್ಯ ರೂಪಿಸಲು ದತ್ತು ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಸದ್ಯ ಕೇರಳ ರಾಜ್ಯದ ಪೋಷಕರು ಮೂರುವರೆ ತಿಂಗಳ ಗಂಡು ಮಗುವನ್ನು ದತ್ತು ಪಡೆದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಗು ಹಸ್ತಾಂತರಿಸಿದ ಬಳಿಕ ಅತ್ಯಂತ ಕಾಳಜಿಯಿಂದ ಸಾಕಿ ಸಲಹುವಂತೆ ವಿನಂತಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಮಗುವನ್ನು ಇರಿಸಲಾಗಿತ್ತು. ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ್ ಭಜಂತ್ರಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ವಿಶೇಷಾಧಿಕಾರಿ ರವೀಂದ್ರ ರತ್ನಾಕರ್, ಆರ್ ಆರ್. ನಾಡಗೌಡರ್, ಸಚಿನ್ ಹಿರೇಮಠ್ ಮೊದಲಾದವರು ಉಪಸ್ಥಿತರಿದ್ದರು.
ದತ್ತು ಸ್ವೀಕಾರಕ್ಕೆ ಅರ್ಹರು ಯಾರು?
25 ವರ್ಷ ಮೇಲ್ಪಟ್ಟ ಹಾಗೂ 55 ವರ್ಷದೊಳಗಿನ ದಂಪತಿ ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಕೂಡಿರಬೇಕು. ಆರ್ಥಿಕವಾಗಿ ಸಬಲರಾಗಿರಬೇಕು. ಮದುವೆ ಆಗಿ 2 ವರ್ಷಗಳು ಕಳೆದಿರಬೇಕು. ಇನ್ನೂ ಅವಿವಾಹಿತ ಹಾಗೂ ವಿವಾಹ ವಿಚ್ಛೇಧಿತ ಮಹಿಳೆಯರು ಹೆಣ್ಣು ಅಥವಾ ಗಂಡು ಮಗುವನ್ನು ದತ್ತು ಪಡೆಯಬಹುದಾಗಿದೆ. ಆದರೆ ಪುರಷರು ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದಾಗಿದೆ.
ಅಮೆರಿಕಾ, ಆಸ್ಟ್ರೇಲಿಯಾಗೂ ದತ್ತು
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅನುದಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದಿಂದ ದೇಶ-ವಿದೇಶದ ವಿವಿಧೆಡೆ ಮಕ್ಕಳನ್ನು ದತ್ತು ನೀಡಲಾಗಿದೆ. ಈವರೆಗೆ 108ಮಕ್ಕಳನ್ನು ದತ್ತು ನೀಡಲಾಗಿದೆ. ಈ ಪೈಕಿ 4 ಮಕ್ಕಳನ್ನು ಅಮೆರಿಕ ಹಾಗೂ ಆಸ್ಟ್ರೇಲಿಯಾಗೆ ದತ್ತು ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ