ಬೆಳಗಾವಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು (Contaminated Water) ಮೃತಪಟ್ಟಿದ್ದಾರೆ. ಹೊಳೆವ್ವಾ ಬಾಳಪ್ಪ ಧನದವರ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕನಸಗೇರಿ ಗ್ರಾಮದಲ್ಲಿ ಬಾವಿಯ ನೀರು ಸೇವಿಸಿ ಸುಮಾರು ಹತ್ತು ಮಂದಿ ಅಸ್ವಸ್ಥಗೊಂಡಿದ್ದರು. ನಿನ್ನೆ ಸಂಜೆ ಭಾನುವಾರ ಹೊಳೆವ್ವಾ ಬಾಳಪ್ಪ ಅವರಿಗೆ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ನಡೆಸಿ, ಇದೇ ವೇಳೆ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.
ಇದನ್ನೂ ಓದಿ: Road Accident : ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್ ಟಯರ್ ಬ್ಲಾಸ್ಟ್; ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು
ಕೋಲಾರದಲ್ಲಿ ವೃದ್ಧ ಸಾವು
ವೃದ್ಧರೊಬ್ಬರು ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೆಂಕಟರಮಣಪ್ಪ (60) ಮೃತದುರ್ದೈವಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಂಚಾಯಿತಿಯಿಂದಲೇ ಮನೆ ಮನೆಗೂ ನೀರು ಬಿಡುಗಡೆ ಆಗಿದ್ದು, ಆ ನೀರು ಸೇವಿಸಿಯೇ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ