ಬೆಳಗಾವಿ: ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ ತೀವ್ರವಾಗಿ (Dengue Fever) ಏರಿಕೆ ಆಗುತ್ತಿದೆ. ಡೆಂಗ್ಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಡುವವರ ಸಂಖ್ಯೆಯು ಹೆಚ್ಚುತ್ತಿದೆ. ಸದ್ಯ ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೇಯಾ ಕೃಷ್ಣಾ ದೇವದಾತೆ (11) ಎಂಬಾಕೆ ಮೃತಪಟ್ಟಿದ್ದಾಳೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ನಿವಾಸಿ ಥೈಪಾಡ್‌ನಿಂದ ಬಳಲುತ್ತಿದ್ದ ಶ್ರೇಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಅನಾರೋಗ್ಯದಿಂದ ಶ್ರೇಯಾ ಅಸುನೀಗಿದ್ದಾಳೆ. ಬಾಲಕಿ ಸಾವಿನ ಬಗ್ಗೆ ಡಿಹೆಚ್ಒ ಮಹೇಶ ಕೋಣಿ ಮಾಹಿತಿ ನೀಡಿದ್ದಾರೆ.
ಶ್ರೇಯಾ ತಂದೆ ಕೃಷ್ಣಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ವಾಂತಿ ಶುರುವಾಗಿತ್ತು, ಹೀಗಾಗಿ ಮಾರನೆ ದಿನವೆ ಸಂಕೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕಳಿಸಿದ್ದರು. ಅಲ್ಲಿ ಹೋದಾಗ ಡೆಂಘಿ ಆಗಿದೆ ಎಂದು ಹೇಳಿದ್ದರು.
5 ಸಾವಿರ ಗಡಿ ದಾಟಿದ ಡೆಂಗ್ಯೂ
ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜುಲೈ) 1,16,999 ಶಂಕಿತವಾಗಿದ್ದು, ಇದರಲ್ಲಿ 51, 219 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 5548 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಇದುವರೆಗೂ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಬೆಂಗಳೂರು ಸೇರಿ ರಾಜ್ಯಾದ್ಯಂತ 7 ಮಂದಿ ಮೃತಪಟ್ಟಿದ್ದಾರೆ. ಶಿವಮೊಗ್ಗ, ಧಾರವಾಡ, ಮೈಸೂರು, ಹಾವೇರಿಯಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಶಂಕಿತ ಡೆಂಗ್ಯೂನಿಂದ ಬೆಂಗಳೂರಿನಲ್ಲಿ 11 ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಡೆತ್ ಆಡಿಟ್ ರಿಪೋರ್ಟ್ ಸಲ್ಲಿಸಿದ್ದಾರೆ. ಬಾಲಕನ ರಕ್ತದ ಸ್ಯಾಂಪಲ್ಸ್ NIVಗೆ ರವಾನೆ ಮಾಡಲಾಗಿತ್ತು. ವರದಿಯಲ್ಲಿ ಬಾಲಕನಿಗೆ ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಬೆಂಗಳೂರಲ್ಲಿ ಡೆಂಗ್ಯೂಗೆ ಈವರೆಗೆ ಇಬ್ಬರು ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: Dengue fever: ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗ್ತಿವೆ ಡೆಂಗ್ಯೂ ಪ್ರಕರಣಗಳು; ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢ!
ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.
ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ