ಬೆಳಗಾವಿ: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಅಂತೆಯೇ ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರ್ಕಾರದ ಸಂಕಲ್ಪವಾಗಿದೆ. ಗಡಿಭಾಗದ ಗ್ರಾಮ ಪಂಚಾಯಿತಿಗಳು ಹಾಗೂ ಶಾಲೆಗಳ ಅಭಿವೃದ್ಧಿಗೆ(Development Programme) ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಶುಕ್ರವಾರ ರಾಮದುರ್ಗ ತಾಲೂಕಿನ ಅಂದಾಜು 671.28 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು,
ಇದನ್ನೂ ಓದಿ | ವಿಸ್ತಾರ ವಿಶೇಷ | ಡಿಸೆಂಬರ್ ಅಂತ್ಯಕ್ಕೆ ಶ್ರೀರಾಮ ಸೇನೆ 25 ಅಭ್ಯರ್ಥಿಗಳ ಘೋಷಣೆ: BJP ನಿದ್ದೆಗೆಡಿಸಿದ ಮುತಾಲಿಕ್ ನಡೆ
ನವಭಾರತ ನಿರ್ಮಾಣಕ್ಕೆ ಹಾಗೂ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು. ಸುಮಾರು 2739 ಕೋಟಿ ರೂ.ಗಳ ಅನುದಾನವನ್ನು ಕಳೆದ ಮೂರೂವರೆ ವರ್ಷಗಳಲ್ಲಿ ತಂದು ವಿವಿಧ ಇಲಾಖೆಗಳ ಮೂಲಕ ರಾಮದುರ್ಗವನ್ನು ಅಭಿವೃದ್ಧಿಶೀಲ ಕ್ಷೇತ್ರವನ್ನಾಗಿ ಮಾಡಲಾಗಿದೆ. ವಿವಿಧ ಯೋಜನೆಗಳನ್ನು ಈ ಕ್ಷೇತ್ರಕ್ಕೆ ತಂದು ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೆ ಗಂಗೆಯನ್ನು ಹರಿಸುವ ಸಾಹಸವನ್ನು ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾಡಿದ್ದಾರೆ. ಸರ್ಕಾರ ಜನಪ್ರಿಯವಾದರೆ ಸಾಲದು, ಜನಪರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ ಎಂದರು.
ಗಡಿಭಾಗದ ಜಿಲ್ಲೆಗಳ 1800 ಗ್ರಾಮ ಪಂಚಾಯತಿಗಳ ಸಂಪೂರ್ಣ ಅಭಿವೃದ್ಧಿ
ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಚಿಂತನೆ ಮಾಡಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕದ ನಡುಭಾಗದಿಂದ ಹಿಡಿದು ಗಡಿಭಾಗದವರೆಗೂ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ 2 ನೂತನ ಕಾರ್ಯಕ್ರಮ ರೂಪಿಸಿದೆ ಎಂದರು.
ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1800 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ಕಾರ್ಯಕ್ರಮಗಳನ್ನು ಈ ವರ್ಷದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಗಡಿ ಭಾಗದ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೂಪಿಸಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಗಡಿ ಭಾಗದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ
ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಕನ್ನಡ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಗೋವಾದಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು. ಹಾಗೆಯೇ ಸೋಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ 10 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಜತೆಗೆ ರಾಜ್ಯದ ಭಕ್ತರಿಗಾಗಿ ಪುಣ್ಯಕ್ಷೇತ್ರಗಳಾದ ಪಂಡರಾಪುರ, ತುಳಜಾಪುರ, ಶ್ರೀಶೈಲ, ಶಬರಿಮಲೆ ಅಯ್ಯಪ್ಪ ದೇವಾಲಯಗಳಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ ಎಂದರು.
ತಡೆಗೋಡೆ ನಿರ್ಮಾಣಕ್ಕೆ 120 ಕೋಟಿ ರೂ.ಗಳ ಅನುಮೋದನೆ
ರಾಮದುರ್ಗ ತಾಲೂಕಿನ ಕೆಲ ಗ್ರಾಮಗಳು ಪದೇ ಪದೇ ಪ್ರವಾಹದಿಂದ ಬಾಧಿತಗೊಳ್ಳುವುದನ್ನು ತಪ್ಪಿಸಲು ಮಲಪ್ರಭಾ ನದಿ ತೀರದಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರ ಮುಂದಾಗಿದೆ. 120 ಕೋಟಿ ರೂ.ಗಳಿಗಿಂತ ಹೆಚ್ವು ಅನುದಾನವನ್ನು ಅನುಮೋದಿಸಿ ಕಾಮಗಾರಿಗೆ ಅಡಿಗಲ್ಲು ಹಾಕಲಾಗಿದೆ. ಶಾಶ್ವತವಾಗಿ ಊರುಗಳನ್ನು ಉಳಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಅದೇ ರೀತಿ ಈ ಭಾಗದ 19 ಕೆರೆಗಳನ್ನು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಲಾಗುವುದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಎಲ್ಲ ಸಮುದಾಯಗಳಿಗೆ ಸರ್ಕಾರಿ ಸೌಲಭ್ಯ
ಹತ್ತು ಲಕ್ಷಕ್ಕೂ ಅಧಿಕ ಮಕ್ಕಳಿಗೆ 600 ಕೋಟಿ ರೂಪಾಯಿ ಶಿಷ್ಯವೇತನವನ್ನು ರೈತ ವಿದ್ಯಾನಿಧಿ ಯೋಜನೆ ಮೂಲಕ ಒದಗಿಸಲಾಗಿದೆ. ಇದೇ ರೀತಿ ಕೃಷಿ ಕೂಲಿಕಾರರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ. 6 ಲಕ್ಷ ಕೃಷಿ ಕೂಲಿಕಾರರ ಮಕ್ಕಳಿಗೆ ವಿದ್ಯಾ ನಿಧಿ ನೀಡಲಾಗುವುದು. ಎಲ್ಲ ಸಮುದಾಯಗಳಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. 20 ಕುರಿ ಮತ್ತು 1 ಮೇಕೆಯಂತೆ 20 ಸಾವಿರ ಕುರಿಗಾಹಿಗಳ ಸಂಘಗಳಿಗೆ ನೀಡುವ ಯೋಜನೆಗೆ 354 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.
ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ:
ಕಾಯಕ, ಸ್ತ್ರೀ ಸಾಮರ್ಥ್ಯ, ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಎಲ್ಲ ವರ್ಗದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ನೆರವು ನೀಡುತ್ತಿದೆ. ವಿವೇಕ ಯೋಜನೆಯಡಿ 8000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ. 30 ಜಿಲ್ಲೆಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗಿದ್ದು, ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಕೆಎಂಎಫ್ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಶಾಸಕರಾದ ಅನಿಲ್ ಬೆನಕೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ | ಡಿ.ಕೆ.ಶಿವಕುಮಾರ್ ಯಾರ ಶಿಷ್ಯ, ಎಲ್ಲಿಂದ ಬಂದದ್ದು ಗೊತ್ತಿದೆ: ನಳಿನ್‍ಕುಮಾರ್ ಕಟೀಲ್ ವಾಗ್ದಾಳಿ