Site icon Vistara News

Satish Jarakiholi : ಡಿಕೆಶಿ ಹಸ್ತಕ್ಷೇಪ ನಿಜ, ಆದರೂ ಕಾಂಪ್ರೊಮೈಸ್‌ ಆಗಿದ್ದೇನೆ ಎಂದ ಸತೀಶ್‌ ಜಾರಕಿಹೊಳಿ

Satish Jarakiholi Lakshmi hebbalkar DK Shivakumar

ಬೆಂಗಳೂರು: ಬೆಳಗಾವಿ ಜಿಲ್ಲೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಹಸ್ತಕ್ಷೇಪ ಇರುವುದು ನಿಜ (Interference is true) ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ನೇರವಾಗಿ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ತಾನು ಪಕ್ಷಕ್ಕಾಗಿ ಕಾಂಪ್ರೊಮೈಸ್ (Compromised for the sake of party) ಆಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ಹಲವು ಬಾರಿ ಹಸ್ತಕ್ಷೇಪ ಆಗಿದೆ. ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಆಗಿದೆ. ನಾಲ್ಕು ತಿಂಗಳಲ್ಲಿ ಹಲವಾರು ಬಾರಿ ಆಗಿದೆ. ನಾನು ಅನುಸರಿಸಿಕೊಂಡು ಹೋಗುತ್ತಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಕಾಂಪ್ರೊಮೈಸ್‌ ಆಗಿದ್ದೇನೆ. ಹಾಗಂತ ನಾನು ವೀಕ್‌ ಅಂತಲ್ಲ ಎಂದು ಎಚ್ಚರಿಕೆಯ ನುಡಿಯಾಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಳಗಾವಿಗೆ ಹೋದಾಗ ಯಾವ ಶಾಸಕರೂ ಅವರನ್ನು ಸ್ವಾಗತಿಸಲು ಹೋಗದೆ ಇದ್ದ ಬಗ್ಗೆ ಕೇಳಿದಾಗ, ನಾನು ಒಂದು ದಿನದ ಮೊದಲೇ ಡಿಕೆಶಿಯವರಿಗೆ ವಿಷಯ ತಿಳಿಸಿದ್ದೆ. ಸಭೆಗೆ ಬರಲು ಆಗುವುದಿಲ್ಲ ಎಂದಿದ್ದೆ. ಡಿಕೆಶಿ ಸ್ವಾಗತ ಮಾಡಲು ಆಗಿಲ್ಲ. ಜಿಲ್ಲಾಧ್ಯಕ್ಷರು ಮೈಸೂರಿಗೆ ಹೋಗಿದ್ದರು. ಇನ್ನೂ ಹಲವು ಶಾಸಕರು ಕೂಡಾ ಇರಲಿಲ್ಲ ಎಂದರು.

ನಾನು ಹೇಳುತ್ತೇನೆ, ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು!

ನಾನು ಹಲವರ ಟ್ರಾನ್ಸ್‌ಫರ್‌ಗೆ ಶಿಫಾರಸು ಮಾಡಿದ್ದೆ. ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿಗಮ ಮಂಡಳಿ ಕಾರ್ಯಕರ್ತರಿಗೆ ಕೊಡಿ ಅಂತ ಶಿಫಾರಸು ಮಾಡಿದ್ದೆ. ಕೇವಲ ಶಾಸಕರಿಗೆ ಮಾತ್ರ ಬೇಡ ಅಂತ ಹೇಳಿದ್ದೇನೆ. ಮಾಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎನ್ನುತ್ತಾ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಜೊತೆ ಅಸಮಧಾನ ಇದೆ ಅಂತ ಒಪ್ಪಿಕೊಂಡರು ಸತೀಶ್ ಜಾರಕಿಹೊಳಿ.

ʻʻಜಿಲ್ಲಾಧ್ಯಕ್ಷರ ಬದಲಾವಣೆ, ಕಾರ್ಯಧ್ಯಕ್ಷರ ಬದಲಾವಣೆ ಶಿಫಾರಸು ಮಾಡಿದ್ದೇನೆ. ಅವರು ಯಾವ ರೀತಿಯಲ್ಲಿ ಮಾಡ್ತಾರೆ ಅಂತ ನೋಡೋಣ. ಸುಮಾರು ಜನರ ಹೆಸರು ಚರ್ಚೆಯಲ್ಲಿ ಇದೆ. ಹೈಕಮಾಂಡ್ ಯಾವ ತೀರ್ಮಾನ ‌ಮಾಡ್ತಾರೆ ಅಂತ ನೋಡೋಣ. ಡಿ ಕೆ ಶಿವಕುಮಾರ್ ಮನೆಗೆ ಹೋಗಿ ಮಾತನಾಡಿದ್ದೇನೆ. ಅಸಮಧಾನ ಅಂತ ಏನಿಲ್ಲ, ನಮ್ಮ ಸಮಸ್ಯೆ ಅವರಿಗೆ ಹೇಳಿದ್ದೇನೆ. ಕೆಲ ಬದಲಾವಣೆಗೆ ಹೇಳಿದ್ದೇನೆʼʼ ಎಂದು ಜಾರಕಿಹೊಳಿ ನುಡಿದರು.

ಸವದಿ ಕಾರ್ಯಾಧ್ಯಕ್ಷ ಸ್ಥಾನ ಕೇಳಿಲ್ಲ ಎಂದ ಜಾರಕಿಹೊಳಿ

ಬಿಜೆಪಿಯಿಂದ ಬಂದಿರುವ ಲಕ್ಷ್ಮಣ ಸವದಿ ಎಲ್ಲೂ ಕಾರ್ಯಧ್ಯಕ್ಷ ಸ್ಥಾನ ಕೇಳಿಲ್ಲ. ಮಾಡುವುದಾದರೆ ನಮ್ಮ ಅಭ್ಯಂತರ ಏನು ಇಲ್ಲ. ಸವದಿ, ಅಂಜಲಿ ನಿಂಬಾಳ್ಕರ್ ಯಾರೇ ಕಾರ್ಯಾಧ್ಯಕ್ಷ ಆದರೂ ಅಡ್ಡಿಯಿಲ್ಲ ಎಂದು ನುಡಿದರು ಸತೀಶ್‌ ಜಾರಕಿಹೊಳಿ.

ಸವದಿ ಕೂಡ ಕಾಂಗ್ರೆಸ್ಸಿಗೆ ಬರುವಾಗ ನನ್ನ ಜೊತೆ ಮಾತನಾಡಿದ್ದರು. ಕಿರಿಕಿರಿ ಮಾಡೋದಾದ್ರೆ ನಾನು ಬರಲ್ಲ ಅಂದಿದ್ದರು ಎಂದು ನೆನಪಿಸಿಕೊಂಡರು ಸತೀಶ್‌ ಜಾರಕಿಹೊಳಿ.

ಪ್ರವಾಸ ಪ್ಲ್ಯಾನ್‌ ಮುಂದೆ ಕೂಡಾ ಇರುತ್ತದೆ ಎಂದ ಸತೀಶ್‌

ದಸರಾ ಸಂದರ್ಭದಲ್ಲಿ ಆ ಭಾಗದ 15ಕ್ಕೂ ಹೆಚ್ಚು ಶಾಸಕರು ಮೈಸೂರಿಗೆ ಹೋಗುವ ಪ್ಲ್ಯಾನ್‌ ಮಾಡಿದ್ದರು. ಆದರೆ, ಅದರಿಂದ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್‌ ಬೇಡ ಅಂದಿತ್ತು. ಆದರೆ, ಮುಂದೆಯಾದರೂ ಟೂರ್‌ ಪ್ಲ್ಯಾನ್‌ ಇದ್ದೇ ಇರುತ್ತದೆ ಎಂದು ಸಚಿವರು ಹೇಳಿದರು.

ʻʻನಾವು ಟೂರು ಮಾಡಲು ಯಾವುದೇ ಅಡ್ಡಿಯಿಲ್ಲ. ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ, ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು. ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆʼʼ ಎಂದರು ಸತೀಶ್‌ ಜಾರಕಿಹೊಳಿ.

ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ, ಸೈಲೆಂಟ್‌ ದೌರ್ಬಲ್ಯವಲ್ಲ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಜತೆ ಯಾವುದೇ ಕಿರಿಕಿರಿ ಇಲ್ಲ. ನಾವು ಅದನ್ನು ಮೀರಿ ಬೆಳೆದಿದ್ದೇವೆ. ನಾವು ಎಲ್ಲರನ್ನೂ ಸಂಭಾಳಿಸಿಕೊಂಡು‌ ಹೋಗಬೇಕು ನಾನು ಆರು ಬಾರಿ ಶಾಸಕ ಆಗಿದ್ದೇನೆ. ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ‌ ಸಚಿವರಾಗಿದ್ದಾರೆ. ಎಲ್ಲರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕುʼʼ ಎಂದು ಹೇಳಿದರು.

ʻʻನನ್ನ ಸೈಲೆಂಟ್‌ ನೇಚರ್‌ ದೌರ್ಬಲ್ಯ ಅಲ್ಲ, 30 ವರ್ಷದ ರಾಜಕೀಯದಲ್ಲಿ ಸಕ್ಸಸ್ ಕೊಟ್ಟಿದೆ” ಎಂದು ಹೇಳುವ ಮೂಲಕ ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಾರ್ಮಿಕ ತಿರುಗೇಟು ನೀಡಿದರು. ನಾನು ಅನೇಕ ಬಾರಿ ಕಾಂಪ್ರಮೈಸ್ ಆಗಿದ್ದೇನೆ…ಮುಂದೆಯೂ ಆಗುತ್ತೇನೆ. ಹಾಗಂತ ವೀಕ್ ಅಂತಲ್ಲ…ನನ್ನ ಸೈಲೆಂಟ್ ನನ್ನ ಸಕ್ಸಸ್ ಎಂದರು.

Exit mobile version